ಹೊಸದಿಗಂತವರದಿ,ಬಳ್ಳಾರಿ:
ಚುನಾವಣೆ ಬೇರೆ, ಸಂಬಂಧಗಳು ಬೇರೆ, ಚುನಾವಣೆ ಅಂತ ಬಂದಾಗ ಎದುರಾಳಿ ಯಾರೇ ಇರಲಿ ಗೆಲುವಿಗಾಗಿ ಹೊರಾಡಬೇಕು, ಇದು ಅನಿವಾರ್ಯ, ಚುನಾವಣೆಗೆ, ಸಂಬಂಧಕ್ಕೂ ಹೋಲಿಕೆ ಬೇಡ, ಕಳೆದ ಚುನಾವಣೆಯಲ್ಲಿ ಸಹೋದರರು ಪರಸ್ಪರ ವಿರೋಧಿಗಳಂತೆ ಗೆಲುವಿಗಾಗಿ ಹೋರಾಟ ಮಾಡಲಾಗಿತ್ತು. ಆದರೆ, ನಾವು ಎಂದಿಗೂ ಒಂದೇ, ನಮ್ಮಲ್ಲಿ ಯಾವತ್ತೂ, ಎಂದಿಗೂ ಬಿರುಕು ಎನ್ನುವ ಶಬ್ದವೇ ಬರೋಲ್ಲ, ಅದಕ್ಕೆ ನಾನು ಅವಕಾಶ ನೀಡೋಲ್ಲ, ನಾವೆಂದೂ ಒಂದೇ ಎಂದು ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದ ಸಭಾಂಗಣದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಕ್ರಿಯ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ನಮ್ಮ ನಮ್ಮಲ್ಲೆ ಬಿರುಕು ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ಯಾರೇ ಕೈ ಹಾಕಿದರು, ಅದು ವ್ಯರ್ಥ. ರೆಡ್ಡಿ ಸಹೋದರರನ್ನು ಯಾರು ಅಗಲಿಸಲು ಸಾಧ್ಯವೇ ಇಲ್ಲ, ನಮ್ಮ ಸಹೋದರರಲ್ಲಿ ಪ್ರೀತಿ, ವಿಶ್ವಾಸ ಎಂದಿಗೂ ಕಡಿಮೆಯಾಗಿಲ್ಲ, ಆಗೋದು ಇಲ್ಲ, ಬಿರುಕು ಉಂಟುಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು ಎಂದು ಹಗಲು ಕನಸು ಕಾಣುವ ದುಷ್ಠ ಶಕ್ತಿಗಳು ಈ ಸಾಹಸಕ್ಕೆ ಇಂದೆ ಕೈ ಬಿಡಿ, ರೆಡ್ಡಿ ಸಹೋದರರನ್ನು ಎಂದಿಗೂ ಅಗಲಿಸಲು ಸಾಧ್ಯವೇ ಇಲ್ಲ, ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದೇವೆ, ಮುಂದೆಯೂ ಇದೇ ರೀತಿ ಇರುತ್ತೇವೆ ಎಂದರು.
ನಾನಾ ಕಾರಣಗಳಿಂದ ಜಿಲ್ಲೆಯಲ್ಲಿ ಕಮಲ ಪಾಳೆಯಕ್ಕೆ ಸ್ವಲ್ಪ ಹಿನ್ನೆಡೆಯಾಗಿದೆ, ಅದು ಶೀಘ್ರದಲ್ಲೇ ಸರಿಹೋಗಲಿದೆ, ಮತ್ತೆ ಜಿಲ್ಲೆಯಲ್ಲಿ ಕಮಲ ಅರಳಲಿದೆ, ಅನುಮಾನವೇ ಬೇಡ. ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿಯ ವೈಭವ ಮರುಕಳಿಸಲಿದೆ, ಬಿಜೆಪಿಯನ್ನು ಜಿಲ್ಲೆಯಲ್ಲಿ ಮತ್ತೆ ಗಟ್ಟಿಗೊಳಿಸಲಿದ್ದೇವೆ, ಇದೆ ನಮ್ಮ ಮೊದಲ ಗುರಿಯಾಗಿದೆ, ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಮಾಜಿ ಸಚಿವ ಸಹೋದರ ಗಾಲಿ ಜನಾರ್ದನ ರೆಡ್ಡಿ ಅವರು ಆಡುವ ಪ್ರತಿ ಮಾತಿಗೆ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ಅವರು, ಸಮ್ಮತಿಸಿದಂತೆ, ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಹಾಗೆ ಭಾಸವಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಂತೆ ಗೆಲುವಿಗಾಗಿ ಹೋರಾಟ ಮಾಡಿದ್ದ ರೆಡ್ಡಿ ಸಹೋದರರು ಇಂದು ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಇಬ್ಬರು ಒಂದೇ ವೇದಿಕೆಯಲ್ಲಿ ಜಂಟಿಯಾಗಿ ಭಾಗವಹಿಸಿರುವುದು ವಿಶೇಷವಾಗಿ ಗಮನಸೆಳೆಯಿತು. ಪರಸ್ಪರ ಇಬ್ಬರು ವೇದಿಕೆಯಲ್ಲಿ ಮಾತನಾಡಿರುವುದು ವೇದಿಕೆ ಗಮನಸೆಳೆಯಿತು.ಇದು ನೆರೆದ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ ಅವರ ಪತ್ನಿ, ಅರುಣಾ ಲಕ್ಷ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನ ಗೌಡ, ಜಿಲ್ಲಾಧ್ಯಕ್ಷ ಗಣಪಲ್ ಐನಾಥ ರೆಡ್ಡಿ, ಮುಖಂಡರಾದ ಡಾ.ಮಹಿಪಾಲ, ಗೋನಾಳ ರಾಜಶೇಖರ್ ಗೌಡ, ಓಬಳೇಶ್, ಎಚ್.ಹನುಮಂತಪ್ಪ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಮ್ಮುರ್ ಶೇಖರ್, ಮಾರುತಿ ಪ್ರಸಾದ್, ಮಾಜಿ ಮೇಯರ್ ವೆಂಕಟರಮಣ, ಕೆ.ಎಸ್.ದಿವಾಕರ್, ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ, ಸುರೇಖಾ ಮಲ್ಲನಗೌಡ, ಸೇರಿದಂತೆ ಇತರರಿದ್ದರು.