ಹೊಸದಿಗಂತ ಕಾರವಾರ:
“ರಾಷ್ಟ್ರ ಹಿತಕ್ಕಾಗಿ ಶ್ರಮಿಸುವುದು ಕೇವಲ ಆಶಯವಲ್ಲ, ಅದು ಪ್ರತಿಯೊಬ್ಬ ಭಾರತೀಯ ನಾಗರಿಕನ ಪರಮ ಕರ್ತವ್ಯವಾಗಿದೆ” ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದರು.
ತಾಲ್ಲೂಕಿನ ಸಿಕ್ಸ್ ಮೈಲ್ ಚೆಂಡಿಯಾದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ (ಅರಗಾ-ಚೆಂಡಿಯಾ ಮಂಡಲ) ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮ್ಮೇಳನ ಹಾಗೂ ಶೋಭಾ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗೋ ಪೂಜೆ ನೆರವೇರಿಸಿದ ರೂಪಾಲಿ ನಾಯ್ಕ, ಭಾರತೀಯ ಪರಂಪರೆಯ ಮಹತ್ವವನ್ನು ಒತ್ತಿ ಹೇಳಿದರು. “ನಮ್ಮ ಭವ್ಯವಾದ ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ದೇಶದ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ” ಎಂದು ಅವರು ಕರೆ ನೀಡಿದರು.
ಸಮ್ಮೇಳನದ ಅಂಗವಾಗಿ ನಡೆದ ಶೋಭಾ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೇಸರಿ ಧ್ವಜಗಳೊಂದಿಗೆ ಸಾಗಿದ ಈ ಮೆರವಣಿಗೆಯು ಇಡೀ ಪರಿಸರದಲ್ಲಿ ಭಕ್ತಿ ಭಾವವನ್ನು ಮೂಡಿಸಿತು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಶ್ರೀ ಭಾವೇಶಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಖ್ಯಾತ ಅಂಕಣಕಾರ ಆದರ್ಶ ಗೋಖಲೆ ಅವರು ಸನಾತನ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಕ್ತಾರ ಗಣೇಶ ತೆಕ್ಕಟೆ, ಪ್ರಮುಖರಾದ ಅಶೋಕ ತೆಂಡೂಲ್ಕರ್, ಸೀತಾರಾಮ ಗಾಂವಕರ, ಪರ್ಬತ್ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.


