ಹೊಸದಿಗಂತ ದಾವಣಗೆರೆ:
ಆನಗೋಡು ಸಮೀಪದ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಈ ಘಟನೆಯಿಂದ ಎಚ್ಚೆತ್ತಿರುವ ಅರಣ್ಯ ಇಲಾಖೆ, ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯವನ್ನು ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಮುಚ್ಚಿದೆ.
ಕಳೆದ ಜನವರಿ 16 ರಿಂದ 18 ರ ಅವಧಿಯಲ್ಲಿ ಒಟ್ಟು ನಾಲ್ಕು ಜಿಂಕೆಗಳು ಸಾವನ್ನಪ್ಪಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಜಿಂಕೆಗಳಿಗೆ ಹೆಮರಾಜಿಕ್ ಸೆಪ್ಟಿಸೆಮಿಯಾ (HS) ಎಂಬ ಸಾಂಕ್ರಾಮಿಕ ರೋಗ ತಗುಲಿರುವ ಶಂಕೆಯಿದೆ. ಮೃತ ಜಿಂಕೆಗಳ ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಪ್ರಸ್ತುತ ಮೃಗಾಲಯದಲ್ಲಿರುವ ಉಳಿದ 166 ಜಿಂಕೆಗಳಿಗೆ (ಒಟ್ಟು 170 ರಲ್ಲಿ) ರೋಗ ನಿರೋಧಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರು ಸೋಮವಾರ ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮೃಗಾಲಯದ ನಿರ್ವಹಣೆಯಲ್ಲಿ ಕಂಡುಬಂದ ಲೋಪದೋಷಗಳನ್ನು ಕಂಡು ಶಾಸಕರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಆಹಾರ ದಾಸ್ತಾನು ಕೊಠಡಿಯಲ್ಲಿ ಕೊಳೆತ ತರಕಾರಿ ಮತ್ತು ಕಾಳುಗಳು ಪತ್ತೆಯಾಗಿವೆ. 33 ಲಕ್ಷ ರೂ. ವೆಚ್ಚದ ಆಹಾರ ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.
ನೂರು ಜನ ಪ್ರವಾಸಿಗರು ಬಂದರೆ ಕೇವಲ 25 ಜನರಿಗೆ ಮಾತ್ರ ಟಿಕೆಟ್ ನೀಡಿ, ಉಳಿದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಾಣಿಗಳಿಗೆ ಗುಣಮಟ್ಟದ ಆಹಾರ ನೀಡದ ಕಾರಣ ಸಾವು ಸಂಭವಿಸಿರಬಹುದು ಎಂದು ಶಾಸಕರು ಶಂಕಿಸಿದ್ದು, ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


