ಹೊಸದಿಗಂತ ವರದಿ,ರಾಯಚೂರು :
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಐದು ದಶಕಗಳಿಂದಲೂ ಪರಿಶುದ್ದ ರಾಜಕೀಯ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ನ್ಯಾಯಬದ್ದವಾಗಿ ಮಂಜೂರಾಗಿದ್ದ ಜಮೀನನ್ನು ಹಿಂದಿರುಗಿಸಿ ಖರ್ಗೆ ಮೇಲ್ಪಂಕ್ತಿ ಹಾಕಿದ್ದಾರೆ. ಈಗ ಬಿಜೆಪಿ ನಾಯಕರು ಮಂಜೂರು ಮಾಡಿಸಿಕೊಂಡಿರುವ ಜಮೀನು, ನಿವೇಶನಗಳನ್ನು ಎಂದು ಹಿಂದಿರುಗಿಸುತ್ತೀರೀ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಐದು ದಶಕಗಳಿಂದಲೂ ಪರಿಶುದ್ಧ ರಾಜಕೀಯ ಜೀವನ ನಡೆಸಿಕೊಂಡು ಬಂದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ತರಬೇತಿ ನೀಡಲು ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕಾನೂನುಬದ್ಧವಾಗಿ ನಿವೇಶನವೂ ಮಂಜೂರಾಗಿತ್ತು. ಬಿಜೆಪಿ ನಾಯಕರ ರಾಜಕೀಯ ದೃಷ್ಠಿಯಿಂದ, ಸುಳ್ಳು ಹಾಗೂ ಅಪಪ್ರಚಾರಕ್ಕೆ ಸಿಲುಕಬಾರದು ಎಂಬ ಕಾರಣಕ್ಕೆ ನ್ಯಾಯಬದ್ಧವಾಗಿ ಲಭ್ಯವಾಗಿದ್ದ ಜಮೀನನ್ನು ಹಿಂದಿರುಗಿಸಿ ರಾಹುಲ್ ಖರ್ಗೆ ಮೇಲ್ಪಂಕ್ತಿ ಹಾಕಿದ್ದಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ನಿಯಮಾನುಸಾರ ಹಂಚಿಕೆಯಾಗಿದ್ದ ಐದು ಎಕರೆ ಜಮೀನನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಖರ್ಗೆ ಕುಟುಂಬದವರು ಮಾದರಿಯಾಗಿದ್ದಾರೆ. ಬಿಜೆಪಿ ನಾಯಕರು ತಮಗೆ ಹಂಚಿಕೆಯಾಗಿದ್ದ ಜಮೀನು, ನಿವೇಶನಗಳನ್ನು ಹಿಂದಿರುಗಿಸಿ ಖರ್ಗೆ ಅವರಂತೆಯೇ ರಾಜ್ಯದ ಜನರಿಗೆ ಆದರ್ಶವಾಗಬೇಕು. ಬಿಜೆಪಿಗರು ತಮ್ಮ ನಿವೇಶನವನ್ನು ಹಿಂದಿರುಗಿಸುತ್ತಾರೆ? ಸದಾ ಮೊಸರಲ್ಲಿ ಕಲ್ಲು ಹುಡುಕುವ ಬಿಜೆಪಿ ನಾಯಕರೇ ನೀವು ಯಾವಾಗ ರಾಹುಲ್ ಖರ್ಗೆ ಅವರಂತೆ ಜಮೀನು, ನಿವೇಶನಗಳನ್ನು ಹಿಂದಿರುಗಿಸಿ ರಾಜ್ಯದ ಜನತೆಗೆ ಮಾದರಿಯಾಗುತ್ತೀರಿ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ದಿಯ ಬಗ್ಗೆ ಖರ್ಗೆ ಅವರಿಗೆ ಹೆಚ್ಚಿನ ಕಾಳಜಿಯಿದೆ. ಈ ಟ್ರಸ್ಟ್ನ ಮೂಲಕ ಈ ಬೀದರ್, ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಮಾಡಿದ್ದಾರೆ.
ಈ ಟ್ರಸ್ಟ್ ಲಾಭಾದಾಯಕವಾಗಿ ಕೆಲಸ ಮಾಡುತ್ತಿಲ್ಲ, ಜನಸಾಮಾನ್ಯರಿಗೆ ಶಿಕ್ಷಣ ಮತ್ತು ಕೌಶಲ್ಯದಲ್ಲಿ ನೆರವು ನೀಡುವ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯ ಹಾಗೂ ಆಡಳಿತ ಮಂಡಳಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನಾಯಕರು ತಮ್ಮ ರಾಜಕೀಯ ಬೇಳೆ ಕಾಳನ್ನು ಬೇಯಿಸಿಕೊಳ್ಳುವ ಭರಾಟೆಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುವದನ್ನು ಬಿಡಬೇಕು ಎಂದು ಸಚಿವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.