ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ 2026ರ ಆರಂಭವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 1-2 ಅಂತರದಿಂದ ಕೈಚೆಲ್ಲಿದೆ. ಈ ಸೋಲಿನ ಬೆನ್ನಲ್ಲೇ ಈಗ ಎಲ್ಲರ ಕಣ್ಣು ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಯ ಮೇಲಿದೆ. ಆದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಆಟವನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ದೀರ್ಘಕಾಲ ಕಾಯುವುದು ಅನಿವಾರ್ಯವಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದ್ದ ಭಾರತ, ನಂತರದ ಎರಡು ಪಂದ್ಯಗಳಲ್ಲಿ ಲಯ ಕಳೆದುಕೊಂಡಿತು. ವಿರಾಟ್ ಕೊಹ್ಲಿ ತಮ್ಮ ಅನುಭವಕ್ಕೆ ತಕ್ಕಂತೆ ಆಡಿದರೂ, ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ನಿರೀಕ್ಷಿತ ರನ್ ಬರಲಿಲ್ಲ. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಈ ಇಬ್ಬರು ದಿಗ್ಗಜರು ಈಗ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಭಾರತ ತಂಡವು ತನ್ನ ಮುಂದಿನ ಏಕದಿನ ಸರಣಿಯನ್ನು ಆಡಲು ಬರೋಬ್ಬರಿ ಆರು ತಿಂಗಳು ಕಾಯಬೇಕಿದೆ. ಮುಂದಿನ ಜುಲೈ ತಿಂಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಭಾರತ vs ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ:
ಜುಲೈ 14: ಮೊದಲ ಪಂದ್ಯ (ಬರ್ಮಿಂಗ್ಹ್ಯಾಮ್)
ಜುಲೈ 16: 2ನೇ ಪಂದ್ಯ (ಕಾರ್ಡಿಫ್)
ಜುಲೈ 19: 3ನೇ ಪಂದ್ಯ (ಲಾರ್ಡ್ಸ್)
ಟೀಂ ಇಂಡಿಯಾ ಜೆರ್ಸಿಯಲ್ಲಿ ರೋಹಿತ್-ವಿರಾಟ್ ನೋಡಲು ಸಮಯ ಬೇಕಿದ್ದರೂ, ಮಾರ್ಚ್ ಅಂತ್ಯದಲ್ಲಿ ಆರಂಭವಾಗಲಿರುವ ಐಪಿಎಲ್ 2026 (ಸೀಸನ್ 19) ರಲ್ಲಿ ಇವರಿಬ್ಬರು ಕಣಕ್ಕಿಳಿಯಲಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಹಾಗೂ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಬ್ಯಾಟ್ ಬೀಸಲಿದ್ದು, ಅಭಿಮಾನಿಗಳಿಗೆ ಇದುವೇ ಸದ್ಯದ ದೊಡ್ಡ ಮನರಂಜನೆ.


