ಹೊಸದಿಗಂತ ಡಿಜಿಟಲ್ ಡೆಸ್ಕ್:
77ನೇ ಗಣರಾಜ್ಯೋತ್ಸವಕ್ಕೆ ರಾಷ್ಟ್ರ ರಾಜಧಾನಿ ಸಜ್ಜಾಗುತ್ತಿದ್ದು, ಕರ್ತವ್ಯ ಪಥದಲ್ಲಿ ನಡೆಯಲಿರುವ ಮೆರವಣಿಗೆಯನ್ನು ವೀಕ್ಷಿಸಲು ದೇಶಾದ್ಯಂತ 10,000ಕ್ಕೂ ಹೆಚ್ಚು ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಅತಿಥಿಗಳು ವಿವಿಧ ಕ್ಷೇತ್ರಗಳಿಂದ ಬಂದವರಾಗಿದ್ದು, ಆದಾಯ ಮತ್ತು ಉದ್ಯೋಗ ಸೃಷ್ಟಿ, ನಾವೀನ್ಯತೆ, ಸಂಶೋಧನೆ, ಸಾಮಾಜಿಕ ಸೇವೆ ಮತ್ತು ಗ್ರಾಮಾಂತರ ಅಭಿವೃದ್ಧಿಯಲ್ಲಿ ವಿಶೇಷ ಸಾಧನೆ ಮಾಡಿರುವವರು ಕೂಡ ಸೇರಿದ್ದಾರೆ. ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳಲ್ಲಿ ಜನ ಭಾಗಶಃ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.
ಆಹ್ವಾನಿತರ ಪಟ್ಟಿಯಲ್ಲಿ ವಿಶ್ವ ಅಥ್ಲೆಟಿಕ್ ಪ್ಯಾರಾ ಚಾಂಪಿಯನ್‌ಶಿಪ್ ವಿಜೇತರು ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಪಂದ್ಯಾವಳಿಗಳಲ್ಲಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳು ಇದ್ದಾರೆ. ನೈಸರ್ಗಿಕ ಕೃಷಿಯನ್ನು ಅಳವಡಿಸಿರುವ ರೈತರು ಮತ್ತು ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ಮೆಕ್ಕೆಜೋಳವನ್ನು ಬೆಳೆಸಲು ಆತಂಭಿಸಲಅದ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಅಡಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ರೈತರನ್ನು ಸಹ ಆಹ್ವಾನಿಸಲಾಗಿದೆ.
ಅತಿಥಿಗಳಲ್ಲಿ ಪಿಎಂ ಸ್ಮೈಲ್ ಯೋಜನೆಯಡಿ ಪುನರ್ವಸತಿ ಪಡೆದ ತೃತೀಯ ಲಿಂಗಿಗಳು ಮತ್ತು ಭಿಕ್ಷುಕರು, ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದ ಫಲಾನುಭವಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಶುಸಂಗೋಪನೆ ಸೇವೆಗಳನ್ನು ಒದಗಿಸುವ ತರಬೇತಿ ಪಡೆದ ಮೈತ್ರಿ ವೃತ್ತಿಪರರು ಇದ್ದಾರೆ.
ಇಸ್ರೋದ ಗಗನಯಾನ ಮತ್ತು ಚಂದ್ರಯಾನ, ಡೀಪ್ ಓಷನ್ ಮಿಷನ್ ಮತ್ತು ಪ್ರಮುಖ ಡಿಆರ್‌ಡಿಒ ಯೋಜನೆಗಳಂತಹ ಪ್ರಮುಖ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಈ ಪಟ್ಟಿಯಲ್ಲಿದ್ದಾರೆ. ಐಸೊಟೋಪ್ ಉತ್ಪಾದನೆ, ಜೈವಿಕ ತಂತ್ರಜ್ಞಾನ, ಸೆಮಿಕಂಡಕ್ಟರ್ಸ್ ಮತ್ತು ಗ್ರೀನ್ ಹೈಡ್ರೋಜನ್‌ನಲ್ಲಿನ ನಾವೀನ್ಯಕಾರರು ಮತ್ತು ಸಂಶೋಧಕರನ್ನು ಸಹ ಆಹ್ವಾನಿಸಲಾಗಿದೆ. ಜತೆಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳ ಅಡಿಯಲ್ಲಿ ಬೆಂಬಲಿತ ಸ್ಟಾರ್ಟ್-ಅಪ್ಸ್ ಮತ್ತು ಎಂಎಸ್‌ಎಂಇಗಳಿಗೂ ಈ ಆಹ್ವಾನ ನೀಡಲಾಗಿದೆ.
ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳು, ಲಖ್ಪತಿ ದೀದಿಗಳು, ಖಾದಿ ವಿಕಾಸ್ ಯೋಜನೆ ಮತ್ತು ಮಹಿಳಾ ಕಾಯಿರ್ ಯೋಜನೆಯಡಿ ತರಬೇತಿ ಪಡೆದ ಮಹಿಳಾ ಕುಶಲಕರ್ಮಿಗಳು, ಪಿಎಂ ಮುದ್ರಾ ಯೋಜನೆಯ ಮೂಲಕ ಬೆಂಬಲಿತ ಮಹಿಳಾ ಉದ್ಯಮಿಗಳು ಮತ್ತು ಪಿಎಂ ಆವಾಸ್ ಯೋಜನೆ (ಗ್ರಾಮೀಣ) ಮತ್ತು ಜಲ ಜೀವನ್ ಮಿಷನ್ ಫಲಾನುಭವಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಶುದ್ಧ ಗಂಗಾ ಅಭಿಯಾನದ ಜಲ ಹೋರಾಟಗಾರರು, ಬಿಆರ್‌ಒ ಮತ್ತು ಕರ್ತವ್ಯ ಭವನದ ನಿರ್ಮಾಣ ಕಾರ್ಮಿಕರು, ಮೈ ಭಾರತ್ ಸ್ವಯಂಸೇವಕರು, ಎನ್‌ಡಿಎಂಎ ಕಾರ್ಯಕರ್ತರು ಮತ್ತು ಈಶಾನ್ಯ ಪ್ರದೇಶದ ಫಲಾನುಭವಿಗಳನ್ನು ಸಹ ಆಹ್ವಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ಅತಿಥಿಗಳಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ, ಪ್ರಧಾನ ಮಂತ್ರಿ ಸಂಗ್ರಹಾಲಯ ಮತ್ತು ದೆಹಲಿಯ ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.


