ಹೊಸ ದಿಗಂತ ವರದಿ, ಮಂಡ್ಯ :
ಎತ್ತಿನ ಹೊಳೆ ಯೋಜನೆ ಸಾಧ್ಯನಾ ಎಂದು ಕುಮಾರಸ್ವಾಮಿ ಸೇರಿದಂತೆ ಹಲವಾರು ಮಂದಿ ಟೀಕಿಸಿದ್ದರು. ಟೀಕೆಗಳು ಸತ್ತಿವೆ, ಕೆಲಸಗಳು ಬದುಕಿವೆ, ಹಣ್ಣು ಚನ್ನಾಗಿ ಇದ್ರೆ ಕಲ್ಲು ಹೊಡೆಯುವವರೇ ಹೆಚ್ಚು, ಕಲ್ಲು ಹೊಡೆಯೊರಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ಪಕ್ಷ ಭೇದವಿಲ್ಲದೆ ನಮಗೆ ಬೆಂಬಲ ನೀಡಿದ್ದಾರೆ, ರಾಜಕೀಯದಲ್ಲಿ ವ್ಯತ್ಯಾಸವಿದ್ದರು ಸಹಕಾರ ನೀಡಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ತೋರೆಕಾಡನಹಳ್ಳಿಯಲ್ಲಿ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹೆಬ್ಬಳ ಚನ್ನಯ್ಯ ನಾಲೆಯನ್ನು ಸಮಗ್ರವಾಗಿ ಅಭಿವೃದ್ದಿಗೊಳಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು.
174 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು, ಈಗ 217 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ, ನಾವು ಮೇಕೆದಾಟು ಯೋಜನೆಗೆ ಹೋರಾಟ ಮಾಡಿದ್ದೇವು, ಹಂತ ಹಂತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ, ಮೇಕೆದಾಟು ಯೋಜನೆಗೆ ತಯಾರು ಮಾಡ್ತಾ ಇದೀವಿ, ನಮಗೆ ಮೇಕೆದಾಟು ಯೋಜನೆಯ ಭೂಮಿ ಪೂಜೆ ಮಾಡುವ ಶಕ್ತಿ ಚಾಮುಂಡಿ ತಾಯಿ ಕೊಡುತ್ತಾಳೆ ಎಂಬ ನಂಬಿಕೆ ಇದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಮೇಕೆದಾಟು ಯೋಜನೆಗೆ ಚಾಲನೆ ನೀಡಲಿದ್ದೇವೆಂದು ಭರವಸೆ ನೀಡಿದರು.