ಗುಡ್‌ ನ್ಯೂಸ್‌, ನಂದಿನಿ ಬ್ರ್ಯಾಂಡ್‌ನ ಇಡ್ಲಿ-ದೋಸೆ ಹಿಟ್ಟು ಶೀಘ್ರವೇ ಮಾರುಕಟ್ಟೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಲ್ಲಿ ಇನ್ನು ಮುಂದೆ ನಂದಿನಿ ಹಾಲಷ್ಟೇ ಅಲ್ಲ, ನಂದಿನಿ ಬ್ರ್ಯಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟು ಕೂಡ ಸಿಗಲಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಡ್ಲಿ ಮತ್ತು ದೋಸೆಗೆ ಅಪಾರ ಬೇಡಿಕೆಯನ್ನು ಮನಗಂಡಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಇಡ್ಲಿ ಮತ್ತು ದೋಸೆ ಹಿಟ್ಟು ಉತ್ಪನ್ನ ಮಾರಾಟಕ್ಕೆ ಸಿದ್ಧತೆ ನಡೆಸಿದೆ.

ಬೆಂಗಳೂರಿನಲ್ಲಿ ರೆಡಿ ಟು ಕುಕ್‌ ಮಾದರಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಐಡಿ, ಅಸಲ್‌, ಎಂಟಿಆರ್‌ ಮುಂತಾದ ಕಂಪನಿಗಳ ದೋಸೆ, ಇಡ್ಲಿ ಹಿಟ್ಟುಗಳು ಈಗಾಗಲೇ ಚಾಲ್ತಿಯಲ್ಲಿವೆ. ಇವುಗಳಿಗೆ ಪೈಪೋಟಿ ನೀಡಲು ಕೆಎಂಎಫ್ ನಿರ್ಧರಿಸಿದ್ದು, ಶೀಘ್ರದಲ್ಲೇ ನಂದಿನಿ ಬ್ರಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಮಾತನಾಡಿ, ಇದಕ್ಕಾಗಿ ಜೆಪಿ ನಗರದಲ್ಲಿರುವ ಮ್ಯಾನುಫ್ಯಾಕ್ಚರಿಂಗ್ ಮತ್ತು ಪ್ಯಾಕೇಜಿಂಗ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಮಾರಂಭ ಆಯೋಜಿಸಲು ಮುಖ್ಯಮಂತ್ರಿಯವರ ಸಮಯ ಕೋರಲಾಗಿದೆ. ಮುಖ್ಯಮಂತ್ರಿಯವರು ಸಮಯಾವಕಾಶ ನೀಡಿದ ಬಳಿಕ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗುವುದು. ಮುಖ್ಯಮಂತ್ರಿಗಳು ಚಾಲನೆ ನೀಡಿದ ನಂತರವೇ ಮಾರಾಟ ಆರಂಭವಾಗಲಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಪ್ರತಿದಿನ 10 ರಿಂದ 20 ಸಾವಿರ ಕೆಜಿ ಹಿಟ್ಟನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿಯೇ ಜಯನಗರದಲ್ಲಿ ಪ್ಯಾಕಿಂಗ್ ಘಟಕ ತೆರೆಯಲಾಗಿದೆ. ಸಿದ್ದ ಹಿಟ್ಟು ಮಾರಾಟಕ್ಕೆ ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರವೇ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಮಾರುಕಟ್ಟೆಯಲ್ಲಿರುವ ಇಡ್ಲಿ ಮತ್ತು ದೋಸೆಯ ಸಿದ್ಧ ಹಿಟ್ಟಿನ ದರಕ್ಕಿಂತ ಕಡಿಮೆ ದರದಲ್ಲಿ ನಂದಿನಿ ಬ್ರ್ಯಾಂಡ್ ನ ಇಡ್ಲಿ ಮತ್ತು ದೋಸೆ ಹಿಟ್ಟು ಗ್ರಾಹಕರಿಗೆ ಲಭ್ಯವಾಗಲಿದೆ. ಬೆಂಗಳೂರು ನಂತರ ಎರಡನೇ ಹಂತದಲ್ಲಿ ರಾಜ್ಯಾದ್ಯಂತ ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟ ವಿಸ್ತರಿಸಲಾಗುವುದು. 450 ಗ್ರಾಂ ಮತ್ತು 900 ಗ್ರಾಂ ಪ್ಯಾಕೆಟ್ ಗಳಲ್ಲಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಬರಲಿದ್ದು, ಶೀಘ್ರವೇ ದರ ನಿಗದಿಪಡಿಸಲಾಗುವುದು ಎಂದು ತಿಳಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!