ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಉಪಚುನಾವಣೆಯ ರಣರಂಗಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಿಜೆಪಿಯ ಟಿಕೆಟ್‌ಗೆ ಪಟ್ಟು ಹಿಡಿದಿದ್ದ MLC ಸಿ.ಪಿ ಯೋಗೇಶ್ವರ್ ಅವರು ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಸಿ.ಪಿ ಯೋಗೇಶ್ವರ್ ನಡೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಹೈಕಮಾಂಡ್‌ನಿಂದ ಟಿಕೆಟ್ ಪಡೆಯಲು ಯೋಗೇಶ್ವರ್ ಭಾರೀ ಕಸರತ್ತು ಮಾಡಿದ್ದರು. ಆದರೆ ಟಿಕೆಟ್ ಸಿಗುವ ಸಾಧ್ಯತೆ ಕ್ಷೀಣಿಸುವುದರಿಂದ ಮಹತ್ವದ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಿ.ಪಿ ಯೋಗೇಶ್ವರ್ ಅವರಿಗೆ ಆಫರ್ ಒಂದನ್ನ ನೀಡಿದ್ದರು. ಆದರೆ ಯಾವುದಕ್ಕೂ ಮಣಿಯದ ಯೋಗೇಶ್ವರ್ ಅವರು ಇಂದು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ?
ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಕರೆ ಮಾಡಿ ರಾಜೀನಾಮೆ ಸಂಬಂಧ ಮಾತುಕತೆ ನಡೆಸಿದ್ದಾರೆ.
ಅನಾರೋಗ್ಯ ನಿಮಿತ್ತ ಹುಬ್ಬಳ್ಳಿಯಲ್ಲಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರು ನೀವೇ ಹುಬ್ಬಳ್ಳಿಗೆ ಬನ್ನಿ ಎಂದಿದ್ದಾರೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಇಂದು ಸಿ.ಪಿ ಯೋಗೇಶ್ವರ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಯೋಗೇಶ್ವರ್ ಅವರು ಈಗಾಗಲೇ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದಾರೆ. ಕೆಂಪೇಗೌಡ ಏರ್ ಪೋರ್ಟ್‌ಗೆ ತೆರಳಿರುವ ಸಿ.ಪಿ ಯೋಗೇಶ್ವರ್ ಇಂದು ಸಂಜೆ ತಮ್ಮ ರಾಜೀನಾಮೆ ಪತ್ರ ನೀಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಸಿ.ಪಿ ಯೋಗೇಶ್ವರ್ ಕೊನೆ ಹಂತದಲ್ಲಿ ರಾಜೀನಾಮೆ ಅಸ್ತ್ರ ಬಳಸಿದ್ದಾರೆ. ಒಂದು ವೇಳೆ BJP ಟಿಕೆಟ್ ಮಿಸ್ ಆದ್ರೆ ಬೇರೆ ಪಕ್ಷದಿಂದ ಸ್ಪರ್ಧಿಸ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಬಿಜೆಪಿ ಹೈಕಮಾಂಡ್ ಯೋಗೇಶ್ವರ್ ಅವರಿಗೆ ಮಣೆ ಹಾಕದಿದ್ದರೆ ಸಿ.ಪಿ ಯೋಗೇಶ್ವರ್ ಅವರು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಸಿ.ಪಿ ಯೋಗೇಶ್ವರ್ ಅವರು ಬೇರೆ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ರೆ ಚನ್ನಪಟ್ಟಣ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್, ಸಿ.ಪಿ ಯೋಗೇಶ್ವರ್ ರಾಜಕೀಯ ರಣತಂತ್ರ ಯಾರು ಗೆಲ್ಲುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.