ಇಂದಿನ ಮನೆಗಳಲ್ಲಿ ಒಂದು ದೃಶ್ಯ ಸಾಮಾನ್ಯವಾಗಿದೆ. ಮಗು ಅತ್ತರೆ, ಜಗಳ ಮಾಡಿದರೆ, ಊಟ ಮಾಡದಿದ್ದರೆ ತಕ್ಷಣ ಕೈಗೆ ಮೊಬೈಲ್. ಆ ಕ್ಷಣದಲ್ಲಿ ಪೋಷಕರಿಗೆ ಶಾಂತಿ ಸಿಗುತ್ತದೆ. ಆದರೆ ಆ ಶಾಂತಿಯ ಬೆಲೆ ಮಕ್ಕಳ ಭವಿಷ್ಯವಾಗಿರಬಹುದೇ ಎಂದು ನಾವು ಎಂದಾದರೂ ಯೋಚಿಸಿದ್ದೇವಾ? ತಂತ್ರಜ್ಞಾನ ನಮ್ಮ ಜೀವನವನ್ನು ಸುಲಭಗೊಳಿಸಿದ್ದರೂ, ಅದನ್ನು ಅತಿಯಾಗಿ ಮತ್ತು ತಪ್ಪು ಸಮಯದಲ್ಲಿ ಬಳಸಿದರೆ ಮಕ್ಕಳ ಬೆಳವಣಿಗೆಗೆ ಅದು ಅಡ್ಡಿಯಾಗಬಹುದು.
ಮಕ್ಕಳಿಗೆ ಫೋನ್ ಕೊಟ್ಟರೆ ಏನಾಗುತ್ತೆ ನೋಡಿ:
ಮಕ್ಕಳ ಮೆದುಳು ಬೆಳವಣಿಗೆಯ ಹಂತದಲ್ಲಿರುವಾಗ, ನಿರಂತರ ಫೋನ್ ಸ್ಕ್ರೀನ್ ನೋಡುವ ಅಭ್ಯಾಸ ಗಮನಶಕ್ತಿಯನ್ನು ಕಡಿಮೆ ಮಾಡುತ್ತದೆ. ಚಿಕ್ಕ ಚಿಕ್ಕ ವಿಡಿಯೋಗಳು ಮತ್ತು ಆಟಗಳು ಮಕ್ಕಳನ್ನು ತಕ್ಷಣದ ಸಂತೋಷಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತವೆ. ಆದರೆ ಇದರಿಂದ ಸಹನೆ, ಏಕಾಗ್ರತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳು ನಿಧಾನವಾಗಿ ಕುಂಠಿತವಾಗುತ್ತವೆ.
ಭಾವನಾತ್ಮಕ ಬೆಳವಣಿಗೆಯಲ್ಲೂ ಇದು ದೊಡ್ಡ ಪ್ರಭಾವ ಬೀರುತ್ತದೆ. ಬೇಸರ, ಕೋಪ, ನಿರಾಶೆ ಇಂತಹ ಭಾವನೆಗಳನ್ನು ಎದುರಿಸುವ ಬದಲು, ಫೋನ್ ಒಂದೇ ಪರಿಹಾರ ಎಂದು ಮಕ್ಕಳು ಕಲಿಯುತ್ತಾರೆ. ಪರಿಣಾಮವಾಗಿ, ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ನಿಯಂತ್ರಿಸುವುದನ್ನು ಕಲಿಯದೆ ಹೋಗುತ್ತಾರೆ.
ದೈಹಿಕ ಆರೋಗ್ಯದ ದೃಷ್ಟಿಯಿಂದಲೂ ಅಪಾಯವಿದೆ. ಕಡಿಮೆ ಚಲನೆ, ಕಣ್ಣುಗಳ ಮೇಲೆ ಒತ್ತಡ, ನಿದ್ರಾ ವ್ಯತ್ಯಯ ಇದೆಲ್ಲವೂ ಫೋನ್ ಸ್ಕ್ರೀನ್ ಅವಲಂಬನೆಯ ಫಲಿತಾಂಶ. ಜೊತೆಗೆ, ಸ್ನೇಹಿತರೊಂದಿಗೆ ಆಟ, ಮಾತುಕತೆ, ಕಲ್ಪನೆಶಕ್ತಿ ಬೆಳೆಯುವ ಅವಕಾಶಗಳು ಕಡಿಮೆಯಾಗುತ್ತವೆ.
ಪೋಷಕರು ಏನು ಮಾಡಬಹುದು?:
ಮಕ್ಕಳನ್ನು ಶಾಂತಗೊಳಿಸಲು ಫೋನ್ ಕೊಡುವ ಬದಲು, ಮಾತುಕತೆ, ಕಥೆ ಹೇಳುವುದು, ಆಟಗಳಲ್ಲಿ ತೊಡಗಿಸುವುದು ಹೆಚ್ಚು ಪರಿಣಾಮಕಾರಿ. ತಂತ್ರಜ್ಞಾನವನ್ನು ಸಂಪೂರ್ಣ ನಿರಾಕರಿಸುವ ಅಗತ್ಯವಿಲ್ಲ, ಆದರೆ ಸಮಯ ಮತ್ತು ಮಿತಿಯೊಂದಿಗೆ ಬಳಸುವುದು ಅತ್ಯವಶ್ಯ. ಇಂದು ನೀವು ಹಾಕುವ ಸಣ್ಣ ನಿಯಂತ್ರಣಗಳು, ನಾಳೆ ಮಕ್ಕಳಿಗೆ ದೊಡ್ಡ ಭದ್ರವಾದ ಭವಿಷ್ಯವನ್ನು ಕಟ್ಟಿಕೊಡಬಹುದು.


