ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ವಿವಾದ ಸಂಬಂಧ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನೀಡಿದ ಹೇಳಿಕೆಯಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವಕೀಲರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸಮನ್ಸ್ ಜಾರಿ ಮಾಡಲಾಗಿದೆ.
ವಕೀಲ ಇಮ್ಮನೇನಿ ರಾಮರಾವ್ ಹೈದರಾಬಾದ್‌ನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಿರುಪತಿ ಲಡ್ಡುವನ್ನು ಭಕ್ತರಿಗೆ ಮಾತ್ರವಲ್ಲದೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಕಳುಹಿಸಲಾಗಿದೆ ಎಂದು ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ. ಪವನ್ ಹೇಳಿಕೆಯಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಿದೆ. ತಿರುಮಲ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಸೇರಿಸಲಾಗಿದೆ ಎಂದು ಹೇಳಿರುವುದು ಅತಿರೇಕದ ಸಂಗತಿ. ಆ ಆರೋಪಗಳಿಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಯೂಟ್ಯೂಬ್ ಚಾನೆಲ್‌ಗಳಿಂದ ತೆಗೆದುಹಾಕಲು ಆದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ವೈ.ರೇಣುಕಾ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ನ.22ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಪವನ್ ಕಲ್ಯಾಣ್ ಗೆ ಸಮನ್ಸ್ ಜಾರಿ ಮಾಡಿದೆ.