ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಪರಿಣಾಮ ಕೊಡಿಗೆಹಳ್ಳಿ ಅಂಡರ್ಪಾಸ್ ಜಲಾವೃತಗೊಂಡು ವಾಹನಗಳು ಸಿಲುಕಿಕೊಂಡಿವೆ.
ಕೊಡಿಗೆಹಳ್ಳಿ ಅಂಡರ್ಪಾಸ್ನಲ್ಲಿ ನೀರು ತುಂಬಿದ್ದರಿಂದ ಟೆಂಪೊ ಟ್ರಾವೆಲರ್, ಖಾಸಗಿ ಬಸ್ ಸಿಲುಕಿಕೊಂಡಿದೆ. ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗಳಲ್ಲಿ ಮಳೆ ನೀರು ಹೊಳೆಯಂತೆ ತುಂಬಿ ಹರಿದಿದ್ದು, ಕೊಡಿಗೆಹಳ್ಳಿ ತಿಂಡ್ಲು ಮುಖ್ಯರಸ್ತೆಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಜಲಾವೃತಗೊಂಡಿದೆ.
ಯಲಹಂಕ ಮುಖ್ಯರಸ್ತೆ ರೈತ ಸಂತೆ ಬಳಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದ್ದು, ದಯಮಾಡಿ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ ಆಗಿದ್ದು, ಚರಂಡಿ ಉಕ್ಕಿ ರಸ್ತೆ ಮೇಲೆ ಹೊಳೆಯಂತೆ ನೀರು ಹರಿದಿದೆ. ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ನಗರದ ಸಾಕಷ್ಟು ರಸ್ತೆಗಳು ಜಲಾವೃತವಾಗಿತ್ತು.