ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಶಬರಿಮಲೆ ದೇಗುಲದ ವಿಧಿವಿಧಾನಗಳು ಪೂರ್ಣಗೊಂಡಿದ್ದು, ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಇಂದು ಬೆಳಗ್ಗೆ ರಾಜಪ್ರತಿನಿಧಿಯ ದರುಶನದ ಬಳಿಕ ದೇಗುಲಕ್ಕೆ ಬೀಗ ಹಾಕಲಾಯಿತು.
ಬೆಳಗ್ಗೆ 5ಕ್ಕೆ ಪೂಜಾ ವಿಧಿವಿಧಾನಗಳನ್ನು ನಡೆಸಲು ದೇಗುಲ ತೆರೆಯಲಾಯಿತು. ರಾಜ ಪ್ರತಿನಿಧಿ ಪುನರ್ಥಮ್ನಾಳ್ ನಾರಾಯಣ ವರ್ಮಾ ದೇವರ ದರುಶನ ಪಡೆದರು. ಬಳಿಕ ದೇಗುಲದ ದ್ವಾರವನ್ನು 6.45ಕ್ಕೆ ಮುಚ್ಚಲಾಯಿತು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಮಂಟಪದಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಿ ಗಣಪತಿ ಹೋಮ ನಡೆಸಲಾಯಿತು. ಇದಾದ ನಂತರ, ತಿರುವಾಭರಣಂ ಮೆರವಣಿಗೆ ಮರಳಿ ಪಂದಳಂ ಸ್ರಾಂಬಿಕ್ಕಲ್ ಅರಮನೆಗೆ ಹಿಂತಿರುಗಿತು. ಪೆರಿಯಸ್ವಾಮಿ ಮರುತುವನ ಶಿವನಕುಟ್ಟಿ ನೇತೃತ್ವದ 30 ಸದಸ್ಯರ ತಂಡ ಆಭರಣ ತಂದ ಮಾರ್ಗದಲ್ಲಿಯೇ ಮರಳಿ ಪವಿತ್ರ ಆಭರಣಗಳನ್ನು ಹೊತ್ತೊಯ್ದಿದೆ. ಜನವರಿ 23ರಂದು ಪಂದಳಂ ತಲುಪುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಹೇಳಿದರು.
ಪ್ರಧಾನ ಅರ್ಚಕ (ಮೇಲ್ಶಾಂತಿ) ಇ.ಡಿ.ಪ್ರಸಾದ್ ನಂಬೂತಿರಿ ಅವರು ಅಯ್ಯಪ್ಪನ ಮೂರ್ತಿಗೆ ವಿಭೂತಿ ಅಭಿಷೇಕ ನೆರವೇರಿಸಿದರು. ದೇವರ ವಿಗ್ರಹವನ್ನು ರುದ್ರಾಕ್ಷಿ ಮಾಲೆಯಿಂದ ಅಲಂಕರಿಸಲಾಯಿತು. ಕೈಯಲ್ಲಿ ಯೋಗ ದಂಡ ಇಡಲಾಗಿತ್ತು. ಪವಿತ್ರ ಹರಿವರಾಸನಂ ಭಜಿಸಿದ ಬಳಿಕ ದೀಪ ಬೆಳಗಿಸಿ, ಗರ್ಭಗುಡಿಗೆ ಬೀಗ ಹಾಕಲಾಯಿತು. ಬೀಗದ ಕೈಗುಚ್ಛವನ್ನು ಪಂದಳಂ ರಾಜ ಪ್ರತಿನಿಧಿಗೆ ಒಪ್ಪಿಸಲಾಯಿತು.


