ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ಗಾಯಕಿ ಶ್ರೆಯಾ ಘೋಷಲ್ ಲೈವ್ ಕಾನ್ಸರ್ಟ್ ನಡೆಸುತ್ತಾ ಇರುತ್ತಾರೆ. ಹಾಡುತ್ತಾ, ಪ್ರೇಕ್ಷಕರನ್ನು ನಗಿಸುತ್ತಾ ಕಾರ್ಯಕ್ರಮನಡೆಸಿಕೊಡುತ್ತಾರೆ. ಆದರೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಕೊಲ್ಕತ್ತಾನಲ್ಲಿ ಶ್ರೆಯಾ ಘೋಷಲ್ ಲೈವ್ ಕಾನ್ಸರ್ಟ್ ಆಯೋಜನೆ ಆಗಿತ್ತು. ಆದರೆ ಶೋನಲ್ಲಿ ಶ್ರೆಯಾ ತಮ್ಮ ಹಾಡುಗಳಿಗೆ ಚಪ್ಪಾಳೆ ತಟ್ಟುವುದು ಬೇಡವೆಂದು ಜನರಲ್ಲಿ ಮನವಿ ಮಾಡಿದರು. ಗಾಯನದ ಮೂಲಕ ಪ್ರತಿಭಟನೆಯನ್ನೂ ಸಹ ಶ್ರೆಯಾ ಘೋಷಲ್ ಮಾಡಿದರು.
ಕೆಲ ತಿಂಗಳ ಹಿಂದೆ ಕೋಲ್ಕತಾದ ಆರ್ಕೆ ಮೆಡಿಕಲ್ ಕಾಲೇಜು ಅತ್ಯಾಚಾರ, ಕೊಲೆ ಪ್ರಕರಣ ದೇಶ, ವಿದೇಶಗಳಲ್ಲಿ ಸುದ್ದಿಯಾಗಿತ್ತು. ಪ್ರಕರಣ ಬೆಳಕಿಗೆ ಬಂದಾಗಿನಿಂದ ಇಂದಿನ ವರೆಗೂ ಪಶ್ಚಿಮ ಬಂಗಾಳದಲ್ಲಿ ವೈದ್ಯರುಗಳು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇದೀಗ ಈ ಪ್ರತಿಭಟನೆಗೆ ಗಾಯಕಿ ಶ್ರೆಯಾ ಘೋಷಲ್ ಸಹ ಬೆಂಬಲ ನೀಡಿದ್ದಾರೆ.
ಲೈವ್ ಕಾನ್ಸರ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೆಯಾ ಘೋಷಲ್, ಮೃತ ವೈದ್ಯ ವಿದ್ಯಾರ್ಥಿನಿಗಾಗಿ ಭಾವುಕ ಹಾಡೊಂದನ್ನು ಹಾಡಿದ್ದಾರೆ.
‘ಈ ಜೀ ಸೋರಿಯರ್, ಚಿತ್ಕಾರ್’ ಎಂಬ ಬೆಂಗಾಲಿ ಹಾಡನ್ನು ಶ್ರೆಯಾ ಘೋಷಲ್, ಮೃತ ವಿದ್ಯಾರ್ಥಿನಿಗಾಗಿ ಹಾಡಿದರು. ಈ ಹಾಡಿನ ಅರ್ಥ ‘ಈ ದೇಹದ ಚೀತ್ಕಾರವನ್ನು ಇಂದು ನೀನು ಕೇಳುತ್ತೀಯ’ ಎಂದು. ಹಾಡು ಹಾಡುವ ಮುಂಚೆ ಪ್ರೇಕ್ಷಕರೊಟ್ಟಿಗೆ ಮಾತನಾಡಿದ ಶ್ರೆಯಾ ಘೋಷಲ್, ಈ ಹಾಡಿಗೆ ಯಾರೂ ಸಹ ಚಪ್ಪಾಳೆ ತಟ್ಟಬೇಡಿ, ಈ ಹಾಡನ್ನು ಅರ್ಥ ಮಾಡಿಕೊಳ್ಳಿ, ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಿ ಎಂದು ಮನವಿ ಮಾಡಿದರು. ಅಂತೆಯೇ ಶ್ರೆಯಾ ಘೋಷಲ್ರ ಕಾರ್ಯಕ್ರಮದಲ್ಲಿ ‘ವೀ ವಾಂಟ್ ಜಸ್ಟಿಸ್’ (ನಮಗೆ ನ್ಯಾಯ ಬೇಕು) ಎಂಬ ಘೋಷಣೆಗಳು ಸಹ ಸತತವಾಗಿ ಕೇಳಿ ಬಂದವು. ಶ್ರೆಯಾ ಸಹ ಘೋಷಣೆಗಳನ್ನು ಬೆಂಬಲಿಸಿದರು.
ಆರ್ಕೆ ಅತ್ಯಾಚಾರ ಪ್ರಕರಣ ಆದ ಸಮಯದಲ್ಲಿ ಶ್ರೆಯಾ ಘೋಷಲ್ ತಮ್ಮ ಲೈವ್ ಕಾನ್ಸರ್ಟ್ ಅನ್ನು ರದ್ದು ಮಾಡಿದ್ದರು. ಆಗಲೂ ಸಹ ಪ್ರಕರಣದ ಬಗ್ಗೆ ತಮ್ಮ ವಿರೋಧ ಪ್ರಕಟಿಸಲೆಂದೇ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ಈಗ ಮತ್ತೆ ಶ್ರೆಯಾ ಘೋಷಲ್ ಕಾರ್ಯಕ್ರಮ ಮಾಡಿದ್ದಾರಾದರೂ ಸಹ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.