ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆಬಿಜೆಪಿಯ ನಾಯಕ ಸಿಪಿ ಯೋಗೇಶ್ವರ್ ಗೆ ಜೆಡಿಎಸ್ ನಿಂದ ಟಿಕೆಟ್ ನೀಡಿ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಲಹೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
3 ದಿನಗಳ ಹಿಂದೆ ಜೆಪಿ ನಡ್ಡಾ ನನಗೆ ಕರೆ ಮಾಡಿದ್ದರು, ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಗೆ ಸೇರ್ಪಡೆಯಾಗುವಂತೆ ಸಿಪಿ ಯೋಗೇಶ್ವರ ಅವರಿಗೆ ಸೂಚನೆ ನೀಡುವುದಾಗಿ ಹೇಳಿದ್ದರು ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಯೋಗೀಶ್ವರ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಒಪ್ಪಿಗೆ ನೀಡುವುದಾಗಿ ಜೆಪಿ ನಡ್ಡಾ ಹೇಳಿದರು ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷರು ಇನ್ನೇನು ಹೇಳುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮೈತ್ರಿ ಮುಖ್ಯವೇ ಹೊರತು ಸೀಟು ಅಲ್ಲ, ನನಗೆ ಎನ್‌ಡಿಎ ಗೆಲ್ಲುವುದು ಬೇಕು, ನಾವು ಬಾಗಲು ಸಿದ್ಧ ಎಂದು ನಡ್ಡಾಗೆ ತಾವು ಹೇಳಿದ್ದೆ. ಕಾರ್ಯಕರ್ತರ ಭಾವನೆಗೆ ಧಕ್ಕೆ ಆಗದಂತೆ ನಿರ್ಧಾರ ಮಾಡುತ್ತೇನೆ. ಕಾರ್ಯಕರ್ತರು ಒಟ್ಟಾಗಿರಿ, ಯಾರಿಗೂ ತಲೆಬಾಗಬೇಕಿಲ್ಲ. ಇನ್ನು ಮೂರು ದಿನ್ ಸಮಯ ಇದೆ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ. ಸಮಯ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿಕೊಂಡರು.
ಕುಮಾರಸ್ವಾಮಿ ಹೇಳಿರುವ ಪ್ರಕಾರ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿಯಾಗಬೇಕು ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ಭಾಷಣ ಮೊಟಕುಗೊಳಿಸಿದ ಎಚ್‌ಡಿಕೆ
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕು, ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಕೊಡಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗಲೂ ಪದೇಪದೆ ಅಡ್ಡಿಪಡಿಸಿ ನಿಖಿಲ್ ಅವರ ಹೆಸರನ್ನು ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಒಂದು ವೇಳೆ ನೀವು ನಿಖಿಲ್ ಅವರನ್ನು ಬಿಟ್ಟು ಯೋಗೇಶ್ವರ್‌ಗೆ ಮಣೆ ಹಾಕಿದರೆ ನಮ್ಮ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಹಠ ಹಿಡಿದರು.
ಕಾರ್ಯಕರ್ತರ ಕೂಗಾಟ, ಆಕ್ರೋಶದ ಕಾರಣದಿಂದ ಕುಮಾರಸ್ವಾಮಿ ಅವರು ಭಾಷಣ ಮುಂದುವರಿಸಲು ಆಗದೆ ಕುಮಾರಸ್ವಾಮಿ ಭಾಷಣ ಮೊಟಕು ಮಾಡಿದರು.