ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸೇರಿ ದೇಶದ 10 ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದ ವಾರ್ಷಿಕ 33 ಸಾವಿರ ಮಂದಿ ಸಾಯುತ್ತಿದ್ದಾರೆ ಎಂಬ ಅಧ್ಯಯನ ವರದಿ ಬೆಳಕಿಗೆ ಬಂದಿದ್ದು, ಇದರ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿವರಣೆ ಕೇಳಿದೆ.
ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಆಧಾರದಲ್ಲಿ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಎನ್‌ಜಿಟಿಯ ಅಧ್ಯಕ್ಷ ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯ ಅರುಣ್ ಕುಮಾರ್ ತ್ಯಾಗಿ, ತಜ್ಞ ಸದಸ್ಯ ಎ ಸೆಂಥಿಲ್ ವೇಲ್ ಅವರ ನೇತೃತ್ವದ ಪ್ರಧಾನ ಪೀಠವು ಕೇಂದ್ರ ಪರಿಸರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ.
ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಣಾಸಿಯಲ್ಲಿ ವಾಯು ಮಾಲಿನ್ಯದಿಂದಾಗಿ ವಾರ್ಷಿಕವಾಗಿ 33,000 ಜನರು ಮೃತಪಡುತ್ತಿದ್ದಾರೆ. ಈ ನಗರಗಳ ಮಾಲಿನ್ಯ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಹೆಚ್ಚು ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.