January20, 2026
Tuesday, January 20, 2026
spot_img

ಮೀಸೆ ಚಿಗುರದ ಹುಡುಗರೂ ಕಾಮೆಂಟ್ ಮಾಡುವಂತಾದ್ರು! ಮಹಿಳೆಯ ಖಾಸಗಿ ಅಂಗದ ಬಗ್ಗೆ ಕೆಟ್ಟ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಟಿ ನಗರಿ ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಗರ ಹೊರವಲಯದ ಆವಲಹಳ್ಳಿ ಅರಣ್ಯ ಪ್ರದೇಶದಲ್ಲಿ ಜಾಗಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರು ಅಪ್ರಾಪ್ತ ಬಾಲಕರ ಗುಂಪೊಂದು ಅವರ ಜತೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ತಮ್ಮ ಅನುಭವದಲ್ಲಿ, 13 ವರ್ಷಕ್ಕೂ ಕಡಿಮೆ ವಯಸ್ಸಿನ ಕೆಲವು ಮಕ್ಕಳು ತಮ್ಮ ದೇಹದ ಕುರಿತು ಅಸಭ್ಯ ಕಾಮೆಂಟ್ ಗಳನ್ನು ಮಾಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದರೂ, ಮಾತುಗಳು ಮಿತಿಮೀರಿದ ಕಾರಣ ಪ್ರಶ್ನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. “ನಿಮ್ಮ ಮನೆಯಲ್ಲೇ ಇದನ್ನೇ ಕಲಿಸುತ್ತಾರಾ?” ಎಂದು ಆ ಮಕ್ಕಳನ್ನು ಗದರಿಸಿದ್ದಾಗಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಹೊರಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳಿಗೆ ಸರಿಯಾದ ಮೌಲ್ಯಗಳು ಮತ್ತು ಗೌರವ ಕಲಿಸುವ ಹೊಣೆ ಪೋಷಕರದ್ದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ವಿಡಿಯೋ ಮಾಡಿ ಸಾರ್ವಜನಿಕಗೊಳಿಸಬೇಕಿತ್ತು ಎಂದು ಸಲಹೆ ನೀಡಿದ್ದರೆ, ಅದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, “ಅದಕ್ಕೆ ಮನಸ್ಸಾಗಲಿಲ್ಲ. ಅವರು ಇನ್ನೂ ಬೆಳೆಯಬೇಕಿದೆ. ಅವರ ಭವಿಷ್ಯ ನನ್ನ ಕಣ್ಣಮುಂದೆ ಬಂತು” ಎಂದು ಹೇಳಿದ್ದಾರೆ.

ಮತ್ತೊಬ್ಬರು, ಇಂತಹ ಅನುಭವಗಳು ಹೊಸದಲ್ಲ, ಇದು ಸಮಾಜದ ಗಂಭೀರ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಇಂದಿಗೂ ಇಂತಹ ಕಿರುಕುಳ ಎದುರಿಸಬೇಕಾಗುತ್ತಿರುವುದು ನೋವಿನ ಸಂಗತಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

Must Read