ಮಥುರಾದತ್ತ ಎಲ್ಲರ ಚಿತ್ತ: ಇಂದು ಆರೆಸ್ಸೆಸ್ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್‌:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಸಭೆ ಮಥುರಾದಲ್ಲಿ ಇಂದು ಆರಂಭಗೊಂಡಿದ್ದು, ಎರಡು ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ಮಹತ್ವದ ಅಂಶಗಳು ಚರ್ಚೆಗೆ ಬರಲಿವೆ.
ಭಾರತೀಯ ಕಾರ್ಯಕಾರಿ ಮಂಡಳಿಯ ಈ ಪ್ರಮುಖ ಸಭೆಯಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ನೀಡಿದ ಸಂದೇಶಗಳನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.

ಸಂಘಶತಾಬ್ದಿ ಗುರಿ ಅನುಷ್ಠಾನದತ್ತ ಚಿತ್ತ
ಸಭೆಯಲ್ಲಿ ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಗುವುದು. ಹಾಗೆಯೇ 2024ರ ಮಾರ್ಚ್ ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿಯೋಜಿತ ವಾರ್ಷಿಕ ಯೋಜನೆಯ ಕುರಿತು ಹಾಗೂ ಸಂಘಕಾರ್ಯ ವಿಸ್ತಾರದ ಕುರಿತು ಮಾಹಿತಿ ನೀಡಲಾಗುವುದು. ಬೈಠಕ್‌ನಲ್ಲಿ ವಿಶೇಷವಾಗಿ ಸಂಘಶತಾಬ್ದಿಯ ನಿಮಿತ್ತ ಸುನಿಶ್ಚಿತಗೊಂಡ ಗುರಿಗಳನ್ನು 2025ರ ವಿಜಯದಶಮಿಯ ಒಳಗೆ ಪೂರ್ಣಗೊಳಿಸುವ ಕುರಿತು ವಿಚಾರ ವಿಮರ್ಶೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಸಮಾಜದತ್ತ ‘ಪಂಚ ಪರಿವರ್ತನೆ
ಈ ಬಾರಿಯ ವಿಜಯದಶಮಿಯಂದು, ಸರಸಂಘಚಾಲಕ್ ಅವರು ತಮ್ಮ ಭಾಷಣದಲ್ಲಿ ಅನೇಕ ವಿಷಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಮಕ್ಕಳಲ್ಲಿ ಅಂತರ್ಜಾಲದ ಋಣಾತ್ಮಕ ಪರಿಣಾಮ ಮತ್ತು ಸರ್ಕಾರದಿಂದ ಸಾಧ್ಯವಿರುವ ನಿಯಂತ್ರಣದ ಬಗ್ಗೆಯೂ ಚರ್ಚಿಸಿದ್ದರು. ಸಮಾಜದಲ್ಲಿ ಶಾಂತಿಪ್ರಜ್ಞೆ, ಪರಸ್ಪರ ಸೌಹಾರ್ದತೆ ಮತ್ತು ಮುಂದೆ ಸಂಘದ ಕಾರ್ಯವ್ಯಾಪ್ತಿ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಇದರ ಹೊರತಾಗಿ ಮಹರ್ಷಿ ದಯಾನಂದ ಸರಸ್ವತಿ, ಭಗವಾನ್ ಬಿರ್ಸಾ ಮುಂಡಾ, ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್, ರಾಣಿ ದುರ್ಗಾವತಿ ಮತ್ತು ಜಾರ್ಖಂಡ್‌ನಲ್ಲಿ ಅನುಕುಲ್ ಚಂದ್ ಠಾಕೂರ್ ಅವರ “ಸತ್ಸಂಗ” ಅಭಿಯಾನದಂತಹ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಡಾ. ಭಾಗವತ್ ಅವರು ಕುಟುಂಬ ಪ್ರಬೋಧನ್, ಸಾಮಾಜಿಕ ಸಾಮರಸ್ಯ, ಪರಿಸರ, ‘ಸ್ವ’ ಆಧಾರಿತ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆ ಸಮಾಜಕ್ಕೆ ಕೊಂಡೊಯ್ಯುವ ಬಗ್ಗೆ ಚರ್ಚಿಸಿದ್ದಾರೆ, ಸಂಘವು ಅದನ್ನು ಸಮಾಜಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತದೆ ಎಂದು ಅಂಬೇಕರ್ ಹೇಳಿದ್ದಾರೆ.

ದೇಶ ಸೇವೆಯಲ್ಲಿ ಇನ್ನಷ್ಟು ಸಕ್ರಿಯ
ದೇಶದಲ್ಲಿ ಯಾವುದೇ ತುರ್ತು ಸ್ಥಿತಿ ಎದುರಾದಾಗ ಸಂಘದ ಕಾರ್ಯಕರ್ತರು ನೆರವಿಗಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ, ಗುಜರಾತ್ ಹಾಗೂ ಒಡಿಶಾದ ಪ್ರವಾಹ ಪರಿಸ್ಥಿತಿಯೂ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಂಘದ ಕಾರ್ಯಕರ್ತರು ಕಾರ್ಯ ನಿರ್ವಹಿಸಿದ್ದರ ಕುರಿತೂ ಪ್ರಸ್ತಾಪವಾಗಲಿದೆ. ಹಾಗೂ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪ್ರಭಾವಕಾರಿಯಾಗಿ ನಿರ್ವಹುಸುವ ಬಗ್ಗೆಯೂ ವಿಚಾರ ಮಾಡಲಾಗುವುದು. ಸಮಾಜದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಇಂದು ಸಮಾಜವು ಸಂಘಟಿತವಾಗಿ ಬಲಿಷ್ಠಗೊಳ್ಳಬೇಕಿದೆ. ನಮ್ಮ ಸಂವಿಧಾನಕ್ಕೂ 75 ವರ್ಷಗಳು ಪೂರ್ಣಗೊಂಡ ವಿಷಯಗಳ ಬಗ್ಗೆಯೂ ಸಭೆಯಲ್ಲಿ ವಿಸ್ತಾರವಾಗಿ ಚರ್ಚಿಸಲಾಗುವುದು. ಈ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತದ 40 ವರ್ಷ ವಯೋಮಿತಿ ಮೀರಿದ ಸಂಘದ ಕಾರ್ಯಕರ್ತರಿಗಾಗಿ 25 ದಿನಗಳ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭ ಕ್ಷೇತ್ರ ಸಂಘಚಾಲಕ ಸೂರ್ಯಪ್ರಕಾಶ ತೋಂಕ್, ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಉಪಸ್ಥಿತರಿದ್ದರು.

ಸಭೆಯಲ್ಲಿ ಯಾರ್‍ಯಾರು?
ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಡಾ. ಕೃಷ್ಣ ಗೋಪಾಲ್, ಸಿ.ಎ. ಮುಕುಂದ, ಅರುಣ್ ಕುಮಾರ್, ರಾಮದತ್ತ್ ಚಕ್ರಧರ್, ಅಲೋಕ್ ಕುಮಾರ್ ಮತ್ತು ಅತುಲ್ ಲಿಮಾಯೆ ಅವರು ಭಾಗವಹಿಸಲಿದ್ದಾರೆ. ಎಲ್ಲಾ ಕಾರ್ಯವಿಭಾಗಗಳ ಪ್ರಮುಖರು, ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಸೇರಿದಂತೆ 393 ಮಂದಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!