ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಮತ್ತು ಅವರ ತಂದೆ ಹಾಗೂ ಸಹೋದರನ ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್‌ಔಟ್ ನೋಟಿಸ್(ಎಲ್‌ಒಸಿ)ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ.
ನಟ ಸುಶಾಂತ್ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ ರಿಯಾ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಆಕೆಯ ತಂದೆ ಲೆಫ್ಟಿನೆಂಟ್ ಕರ್ನಲ್ ಇಂದ್ರಜಿತ್ ಚಕ್ರವರ್ತಿ(ಸೇನಾ ಯೋಧ) ವಿರುದ್ಧ ಸಿಬಿಐ ಹೊರಡಿಸಿದ್ದ ಲುಕ್-ಔಟ್ ನೋಟಿಸ್ ಅನ್ನು ಬಾಂಬ್ ಹೈಕೋರ್ಟ್ ರದ್ದುಗೊಳಿಸಿತ್ತು.
ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠ, ಸಿಬಿಐನ ಅರ್ಜಿ ಅತ್ಯಂತ ಕ್ಷುಲ್ಲಕ ಎಂದು ಕರೆದಿದೆ. ಆರೋಪಿಗಳಲ್ಲಿ ಒಬ್ಬರು ಉನ್ನತ ವ್ಯಕ್ತಿಗಳಾಗಿರುವುದರಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಟೀಕಿಸಿದೆ.
ಜೂನ್ 12, 2020ರಂದು ನಟ ಸುಶಾಂತ್ ಸಿಂಗ್ ಅವರ ಮೃತದೇಹ ಬಾಂದ್ರಾದಲ್ಲಿರುವ ಅವರ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ನಟನ ಕುಟುಂಬಸ್ಥರು ನಟಿ ರಿಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.