ಹೊಸದಿಗಂತ ವರದಿ, ಮಂಡ್ಯ :
ಕೈ ಬೆರಳ ತುದಿಯಲ್ಲಿರುವ ಸಾಮಾಜಿಕ ಮಾಧ್ಯಮಗಳನ್ನು ಉತ್ತಮ ಜ್ಞಾನ ಬೆಳೆಸಿಕೊಳ್ಳಲು ಬಳಸಿಕೊಳ್ಳುವಂತೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಯುವಜನರಿಗೆ ಸಲಹೆ ನೀಡಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ನಾಗಮಂಗಲ ತಾಲೂಕು ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಿಜಿ-ಮೆಡ್ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ಹೇಳಿದರು.
ಅಬ್ದುಲ್ ಕಲಾಂರವರ ಕಲ್ಪನೆಯನಂತೆ ಪ್ರತಿಯೊಬ್ಬರೂ ಕನಸು ಕಾಣಬೇಕು ಹಾಗೂ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಗುರಿ ತಲುಪಲು ಪರಿಶ್ರಮ ಹಾಗೂ ಜ್ಞಾನ ಅವಶ್ಯಕ. ಗುರಿ ಮುಟ್ಟುವಾಗ ಕೆಲವೊಮ್ಮೆ ಸೋಲನ್ನು ಅನುಭವಿಸಬೇಕಾಗುತ್ತದೆ. ಸೋಲು ಗೆಲುವಿನ ಮೆಟ್ಟಿಲು ಎಂದು ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪರಾಷ್ಟ್ರಪತಿ ಪತ್ನಿ ಸುದೇಶ್ ಧನಕರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.