ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್‌ಗಳ ಹೀನಾಯ ಸೋಲು ಅನುಭವಿಸಿದ್ದು, ಇದರೊಂದಿಗೆ ಭಾರತ ತಂಡ 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ.
ಈ ಸರಣಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನ ತೀರ ಕಳಪೆಯಾಗಿತ್ತು. ಒಂದೆಡೆ ಬ್ಯಾಟ್ಸ್‌ಮನ್‌ಗಳು ರನ್ ಕಲೆಹಾಕುವಲ್ಲಿ ಎಡವಿದರೆ, ಇನ್ನೊಂದೆಡೆ ಬೌಲರ್‌ಗಳು ಅಗತ್ಯವಿದ್ದ ಸಮಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಈ ಐತಿಹಾಸಿಕ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ತಂಡ ಎಲ್ಲೆಲ್ಲಿ ಎಡವಿತು ಎಂಬುದನ್ನು ವಿವರಿಸಿದ್ದಾರೆ.
ಈ ಸರಣಿ ಸೋಲು ನನಗೆ ತುಂಬಾ ನೋವುಂಟು ಮಾಡಿದೆ. ಏಕೆಂದರೆ ಟೆಸ್ಟ್ ಪಂದ್ಯದ ಸೋಲಿನ ಜೊತೆಗೆ ನಾವು ಸರಣಿಯನ್ನೂ ಕಳೆದುಕೊಂಡಿದ್ದೇವೆ. ಇದು ಇಡೀ ತಂಡದ ವೈಫಲ್ಯ. ಎರಡನೇ ಟೆಸ್ಟ್ ಸೋಲಿಗೆ ನಾನು ಯಾವುದೇ ಒಬ್ಬ ಆಟಗಾರನನ್ನು ದೂಷಿಸುವುದಿಲ್ಲ. ಬದಲಿಗೆ ನಾವು ತಂಡವಾಗಿ ವಿಫಲರಾಗಿದ್ದೇವೆ. ಯಾವುದೇ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬೌಲರ್ ಅನ್ನು ದೂಷಿಸುವುದು ತಪ್ಪು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವೇ ತಂಡದ ಸೋಲಿಗೆ ಬಹುದೊಡ್ಡ ಕಾರಣ ಎಂದು ರೋಹಿತ್ ಒಪ್ಪಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಪಿಚ್ ಅಷ್ಟು ಕೆಟ್ಟದಾಗಿರಲಿಲ್ಲ, ಬದಲಿಗೆ ನಾವು ಕಳಪೆ ಬ್ಯಾಟಿಂಗ್ ಮಾಡಿದ್ದೇವೆ. ಏಕೆಂದರೆ ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡ ಕಲೆಹಾಕಿದ್ದ ಸ್ಕೋರ್ನ ಸಮೀಪಕ್ಕೂ ಹೋಗಲಿಲ್ಲ. ಸತತವಾಗಿ ವಿಕೆಟ್‌ಗಳು ಪತನವಾಗಿದ್ದು, ಪಂದ್ಯ ಕೈ ತಪ್ಪುತ್ತಿರುವುದು ಸ್ಪಷ್ಟವಾಯಿತು. ಒತ್ತಡವನ್ನು ಎದುರಿಸುವಲ್ಲಿ ನಾವು ವಿಫಲರಾಗಿದ್ದೇವೆ. ಪಿಚ್ ಬದಲಾಗಲು ಪ್ರಾರಂಭಿಸಿದ ಕಾರಣ ಗುರಿ ಏನೇ ಇರಲಿ, ಅದು ಸವಾಲಿನದು ಎಂದು ನಮಗೆ ಯಾವಾಗಲೋ ತಿಳಿದಿತ್ತು. ಇದು ಇಡೀ ತಂಡವಾಗಿ ನಮ್ಮ ವೈಫಲ್ಯವಾಗಿದೆ. ನಾವು ಗೆದ್ದಾಗ ಹೇಗೆ ಎಲ್ಲರೂ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳುತ್ತೇವೋ, ಹಾಗೆಯೇ ಸೋತಾಗಲೂ ಎಲ್ಲರೂ ಸೋಲಿನ ಕ್ರೆಡಿಟ್ ತೆಗೆದುಕೊಳ್ಳಬೇಕು. ನಮ್ಮ ಬ್ಯಾಟಿಂಗ್ ಈ ರೀತಿ ಕುಸಿದಿರುವುದು ಇದೇ ಮೊದಲು. 12 ವರ್ಷಗಳ ನಂತರ ನಮ್ಮ ಬ್ಯಾಟಿಂಗ್ ವಿಭಾಗ ಈ ರೀತಿಯ ಪ್ರದರ್ಶನ ನೀಡಿದೆ. ಒಂದು ವೇಳೆ ನಮ್ಮ ಬ್ಯಾಟಿಂಗ್ ವಿಭಾಗ ನಿರಂತರವಾಗಿ ಈ ರೀತಿಯ ಪ್ರದರ್ಶನ ನೀಡಿದ್ದರೆ, ನಮಗೆ ಈ ಸತತ ಗೆಲುವಿನ ಸರಮಾಲೆ ಸಿಗುತ್ತಿರಲಿಲ್ಲ ಎಂದರು.
ಎದುರಾಳಿ ತಂಡವನ್ನು ಶ್ಲಾಘಿಸಿದ ರೋಹಿತ್ ಶರ್ಮಾ, ನ್ಯೂಜಿಲೆಂಡ್ ತಂಡ ನಮಗಿಂತ ಉತ್ತಮವಾಗಿ ಕ್ರಿಕೆಟ್ ಆಡಿದೆ. ಕೆಲವು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಹೀಗಾಗಿ ನಾವು ಟೆಸ್ಟ್ ಸರಣಿ ಸೋತಿದ್ದೇವೆ. ನಾವು ವಾಂಖೆಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆ ಟೆಸ್ಟ್ ಗೆಲ್ಲಲು ಪ್ರಯತ್ನಿಸುತ್ತೇವೆ. ಇದೊಂದು ಸಾಮೂಹಿಕ ವೈಫಲ್ಯ. ನಾನು ಬ್ಯಾಟ್ಸ್‌ಮನ್ ಅಥವಾ ಬೌಲರ್‌ಗಳನ್ನು ಮಾತ್ರ ದೂಷಿಸುವವನಲ್ಲ ಎಂದಿರುವ ರೋಹಿತ್, ಉತ್ತಮ ಉದ್ದೇಶ, ಆಲೋಚನೆ ಮತ್ತು ವಿಧಾನಗಳೊಂದಿಗೆ ವಾಂಖೆಡೆ ಟೆಸ್ಟ್ ಆಡುತ್ತೇವೆ ಎಂದಿದ್ದಾರೆ.