ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಆಳವಾದ ಸಂಚುರೂಪಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಆರೋಪಿಸಿದೆ.
ಜೊತೆಗೆ ಕೇಜ್ರಿವಾಲ್ ಅವರಿಗೆ ಏನಾದರೂ ಆದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದು ಶನಿವಾರ ಎಚ್ಚರಿಸಿದೆ.
ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಕೇಜ್ರಿವಾಲ್ ಅವರ ‘ಪಾದಯಾತ್ರೆ’ ವೇಳೆ ‘ಬಿಜೆಪಿ ಗೂಂಡಾಗಳು’ ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಎಎಪಿ ನಾಯಕರು ಶುಕ್ರವಾರ ಹೇಳಿದ್ದರು.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ನಿನ್ನೆ ನಡೆದ ‘ಘಟನೆಯಲ್ಲಿ ಪೋಲಿಸ್ ಸಹಭಾಗಿತ್ವವು ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿ ಅವರನ್ನು ಮುಗಿಸುವ ಶತ್ರುವಾಗಿದೆ’ ಎಂದು ಆರೋಪಿಸಿದರು.
ಸಂಜಯ್ ಸಿಂಗ್ ಅವರ ಆರೋಪದ ಬಗ್ಗೆ ಪೊಲೀಸರು ಅಥವಾ ಬಿಜೆಪಿಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದಾಗ್ಯೂ, ವಿಕಾಸಪುರಿ ಘಟನೆಯ ಹೊರತಾಗಿಯೂ, ಕೇಜ್ರಿವಾಲ್ ವೇಳಾಪಟ್ಟಿಯ ಪ್ರಕಾರ ‘ಪಾದಯಾತ್ರೆ’ ಅಭಿಯಾನವನ್ನು ಮುಂದುವರೆಸುತ್ತಾರೆ ಎಂದು ಎಎಪಿ ನಾಯಕ ಹೇಳಿದರು.
ಕೇಜ್ರಿವಾಲ್ ಮೇಲೆ ದಾಳಿ ಬಗ್ಗೆ ಎಎಪಿ ಏಕೆ ದೂರು ದಾಖಲಿಸಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಪೊಲೀಸರು ನಿಷ್ಪಕ್ಷಪಾತವಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಮತ್ತು ಬಿಜೆಪಿ ಯುವ ಘಟಕಕ್ಕೆ ಸೇರಿದ ದಾಳಿಕೋರರ ಗುಂಪನ್ನು ತಡೆಯಲು ಅದರ ಅಧಿಕಾರಿಗಳು ಏನನ್ನೂ ಮಾಡಲಿಲ್ಲ ಎಂದು ಹೇಳಿದರು.