ಹೊಸದಿಗಂತ ವರದಿ,ಅಂಕೋಲಾ:
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಉಡುಪಿ-ಕುಂದಾಪುರ, ಕಾರವಾರ ಭಾಗಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದು ಹಬ್ಬ ಮುಗಿದ ಮೇಲೆ ಮರಳಿ ಬೆಂಗಳೂರಿಗೆ ತೆರಳಲು ಯಾವುದೇ ವಿಶೇಷ ರೈಲಿನ ವ್ಯವಸ್ಥೆ ಇಲ್ಲದಿರುವುದರಿಂದ ಹಾಗು ಪಂಚಗಂಗ ಮತ್ತು ಮುರ್ಡೇಶ್ವರ ರೈಲಿನಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಆಗಿದ್ದು ಮತ್ತು ಬಸ್ಸಿನ ದರ ಗಗನಕ್ಕೇರಿರುವುದರಿಂದ ಕಾರವಾರ, ಉಡುಪಿ-ಕುಂದಾಪುರ ಭಾಗದ ಜನರಿಗೆ ತುಂಬ ಅನಾನುಕೂಲ ಪರಿಸ್ಥಿತಿ ಉಂಟಾಗಿತ್ತು.
ಇದಕ್ಕೆ ಕುಂದಾಪುರ ರೈಲು ಹಿತರಕ್ಷಣ ಸಮಿತಿಯಿ ಮತ್ತು ಉತ್ತರ ಕನ್ನಡ ರೈಲು ಸಮಿತಿಯಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗು ಕುಮಟ ಶಾಸಕ ದಿನಕರ ಶೆಟ್ಟಿಯವರು ವಿಶೇಷ ರೈಲಿಗೆ ಮನವಿ ಕೊಟ್ಟಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೊಂಕಣ ರೈಲ್ವೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಸಂತೋಷ್ ಕುಮಾರ್ ಜಾ ಹಾಗು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಹಾಗು ಕಚೇರಿಯ ಸಿಬ್ಬಂದಿಗಳು ಕ್ಲಪ್ತ ಸಮಯದಲ್ಲಿ ಸ್ಪಂದಿಸಿ ವಿಶೇಷ ರೈಲಿನ ವ್ಯವಸ್ಥೆ ಕಲ್ಪಿಸುವ ಮೂಲಕ ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಅನುಕೂಲ ಮಾಡಿದ್ದಾರೆ.
ಈ ರೈಲು ಭಾನುವಾರ ಮದ್ಯಾಹ್ನ ಹೊರಟು ಸೋಮವಾರ ಬೆಳಗಿನ ಜಾವ 4 ಕ್ಕೆ ಬೆಂಗಳೂರು ತಲುಪಲಿದೆ.
ಈ ಬಾರಿ ರೈಲ್ವೆ ಪ್ರಯಾಣಿಕರ ಭದ್ರತೆಯ ಹಿತದೃಷ್ಟಿಯಿಂದ ಖಾಯ್ದಿರಿಸಿದ ಭೋಗಿಯೊಳಗೆ ಅನಧಿಕೃತ ಪ್ರವೇಶಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ರೈಲ್ವೆ ಪೋಲೀಸರು ತಿಳಿಸಿದ್ದು ಪ್ರಯಾಣಿಕರು ವಿಶೇಷ ರೈಲನ್ನು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಇದಕ್ಕೆ ಸಹಕರಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೂ ಕುಮಟ ಶಾಸಕರಾದ ದಿನಕರ ಶೆಟ್ಟಿಯವರಿಗೂ ಕುಂದಾಪುರ ರೈಲು ಹಿತರಕ್ಷಣ ಸಮಿತಿ ಮತ್ತು ಉತ್ತರ ಕನ್ನಡ ಜಿಲ್ಲಾ ರೈಲು ಸಮಿತಿ ಪರವಾಗಿ ಕಾರ್ಯದರ್ಶಿ ರಾಜೀವ ಗಾಂವಕರ ಧನ್ಯವಾದ ತಿಳಿಸಿದ್ದಾರೆ.