ಹೊಸದಿಗಂತ ಡಿಜಿಟಲ್ ಡೆಸ್ಕ್;
ಅಕ್ಟೋಬರ್ ತಿಂಗಳನ್ನು ಹಿಂದು ಪರಂಪರೆಯ ಮಾಸ ಎಂದು ಆಸ್ಟ್ರೇಲಿಯಾ ಘೋಷಿಸಿದೆ. ಆ ಮೂಲಕ ದೇಶಾದ್ಯಂತ ಹಿಂದು ಸಂಸ್ಕೃತಿ ಮತ್ತು ಪರಂಪರೆಯನ್ನು ಪಸರಿಸುವ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ಸರ್ಕಾರ ತೆಗೆದುಕೊಂಡಿದೆ.
ನವರಾತ್ರಿ, ದೀಪಾವಳಿ ಮತ್ತು ಶರದ್ ಪೂರ್ಣಿಮಾ ಸೇರಿದಂತೆ ಅನೇಕ ಹಬ್ಬಗಳು ಆಚರಣೆಯಾಗುವ ಈ ಅಕ್ಟೋಬರ್ ತಿಂಗಳು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದೆ. ಹೀಗಾಗಿ ಈ ತಿಂಗಳನ್ನು ಹಿಂದು ಪರಂಪರೆಯ ಮಾಸ ಎಂದು ಘೋಷಿಸಿದ್ದಾರೆ.
ಈ ಘೋಷಣೆಯು ವಿವಿಧ ರಾಷ್ಟ್ರಗಳ ಸಂಸ್ಕೃತಿ ಪರಂಪರೆಗೆ ಆಸ್ಟ್ರೇಲಿಯಾ ಸರ್ಕಾರ ನೀಡುವ ಗೌರವ ಮತ್ತು ಬದ್ಧತೆಯನ್ನು ಸಂಕೇತಿಸುತ್ತದೆ ಮತ್ತು ರಾಷ್ಟ್ರದ ಸಾಮಾಜಿಕ ರಚನೆಗೆ ಹಿಂದು ಸಮುದಾಯದ ಕೊಡುಗೆಗಳನ್ನು ಗುರುತಿಸುತ್ತದೆ. ಆಸ್ಟ್ರೇಲಿಯಾವು ಹಿಂದು ತತ್ವಶಾಸ್ತ್ರ, ಮೌಲ್ಯಗಳು ಮತ್ತು ಆಚರಣೆಗಳ ಶ್ರೀಮಂತಿಕೆಯನ್ನು ದೇಶಾದ್ಯಂತ ಪಸರಿಸುವ ಉದ್ದೇಶ ಹೊಂದಿದೆ. ಪ್ರಪಂಚದ ಅತ್ಯಂತ ಹಳೆಯ ಧರ್ಮಗಳಲ್ಲಿ ಒಂದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ಥಳೀಯ ದೇವಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇದೊಂದು ಆಸ್ಟ್ರೇಲಿಯನ್ ಮತ್ತು ಭಾರತೀಯರ ಸಮಾಗಮದ ಕಾರ್ಯಕ್ರಮವಾಗಲಿದೆ. ರಂಗೋಲಿ, ಕಲೆ, ಹಬ್ಬದ ಆಚರಣೆಗಳು ಮತ್ತು ಯೋಗ ಇತ್ಯಾದಿ ಭಾರತೀಯ ಪರಂಪರೆಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸ್ಟ್ರೇಲಿಯಾ ಪ್ರಜೆಗಳೂ ಭಾಗಿಯಾಗಲು ಇದೊಂದು ಉತ್ತಮ ಅವಕಾಶ ಎಂದು ಸರ್ಕಾರ ಹೇಳಿದೆ.