ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದಿಬದಿಯ ಮೊಮೊಸ್ ತಿಂದು ಓರ್ವ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ 20 ಜನರಿಗೆ ಫುಡ್ ಪಾಯ್ಸನ್ ಆಗಿರುವ ಘಟನೆ ಹೈದರಾಬಾದ್ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 33 ವರ್ಷದ ರೇಷ್ಮಾ ಬೇಗಂ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 20 ಜನರು ಫುಡ್ ಪಾಯ್ಸನ್ನಿಂದ ಬಳಲುತ್ತಿದ್ದಾರೆ.
ಖೈರತಾಬಾದ್ನ ಬೀದಿಬದಿ ವ್ಯಾಪಾರಿಯಿಂದ ಮೂವರು ಮೊಮೊಸ್ ತಿಂದಿದ್ದಾರೆ. ತಿಂದು ಮನೆಗೆ ಮರಳಿದ ಸ್ವಲ್ಪ ಸಮಯದ ಬಳಿಕ ಹೊಟ್ಟೆ ನೋವು, ವಾಂತಿಯಿಂದ ಬಳಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಅವರ ತಾಯಿ ಸಾವನ್ನಪ್ಪಿದ್ದು, ಪುತ್ರಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತನಿಖೆಯ ವೇಳೆ ಯಾವುದೇ ಆಹಾರ ಸುರಕ್ಷತಾ ಪರವಾನಗಿ ಇಲ್ಲದೇ ಮಾರಾಟಗಾರ ವ್ಯಾಪಾರ ನಡೆಸುತ್ತಿದ್ದು, ಯಾವುದೇ ರೀತಿಯ ಸ್ವಚ್ಛತೆಯಿಲ್ಲದೇ ಆಹಾರ ತಯಾರಿಸುತ್ತಿರುವುದು ಪತ್ತೆಯಾಗಿದೆ. ಜೊತೆಗೆ ಮೊಮೊಸ್ ತಯಾರಿಸಲು ಬಳಸುವ ಹಿಟ್ಟನ್ನು ಯಾವುದೇ ಪ್ಯಾಕಿಂಗ್ ಇಲ್ಲದೆ ರೆಫ್ರಿಜರೇಟರ್ನಲ್ಲಿ ಇರಿಸಲಾಗಿತ್ತು, ಅದರಲ್ಲೂ ರೆಫ್ರಿಜರೇಟರ್ ಬಾಗಿಲು ಮುರಿದಿರುವುದು ಕೂಡ ಕಂಡುಬಂದಿದೆ. ಹೆಚ್ಚಿನ ತನಿಖೆಗಾಗಿ ಆಹಾರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.