January20, 2026
Tuesday, January 20, 2026
spot_img

ಬಿಗ್‌ಬಾಸ್ ಮುಗಿದ ಬೆನ್ನಲ್ಲೇ ನಟ ಸುದೀಪ್ ಗೆ ಸಂಕಷ್ಟ: 90 ಲಕ್ಷ ವಂಚನೆ ಆರೋಪ, ಕಮಿಷನರ್‌ ಗೆ ದೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಕಿಚ್ಚ ಸುದೀಪ್‌ ವಿರುದ್ಧ ಚಲನಚಿತ್ರ ಹಾಗೂ ಧಾರಾವಾಹಿ ಚಿತ್ರೀಕರಣದ ನೆಪದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಪಟೇಲ್ ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ದೀಪಕ್ ಮಯೂರ್ ಪಟೇಲ್ ಅವರು ನೀಡಿರುವ ದೂರಿನ ಅನ್ವಯ ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದ ಸರ್ವೇ ನಂಬರ್ 275ರಲ್ಲಿ ಇರುವ ತಮ್ಮ ಸ್ವಂತ ತೋಟದ ಜಾಗದಲ್ಲಿ ‘ವಾರಸ್ಥಾರ’ ಧಾರಾವಾಹಿಯ ಚಿತ್ರೀಕರಣ ನಡೆಸಲು 2016ರಲ್ಲಿ ಅನುಮತಿ ಕೋರಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದು, ವಾಸ್ತವವಾಗಿ ನಾಲ್ಕು ತಿಂಗಳ ಕಾಲ ಚಿತ್ರೀಕರಣ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.

ದೂರುದಾರರ ಹೇಳಿಕೆಯಂತೆ, ಧಾರಾವಾಹಿಯ ಕಲಾವಿದರು ಹಾಗೂ ತಾಂತ್ರಿಕ ಸಿಬ್ಬಂದಿ ವಾಸಿಸಲು ಶೆಡ್‌ಗಳನ್ನು ನಿರ್ಮಿಸುವ ಸಲುವಾಗಿ ಕಾಫಿ ಗಿಡಗಳು, ಸಿಲ್ವರ್ ಮರಗಳು ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿದೆ. ಇದರಿಂದ ತೋಟಕ್ಕೆ ಗಂಭೀರ ಹಾನಿಯಾಗಿದ್ದು, ಒಂದು ಎಕರೆ ಜಾಗ ಸಂಪೂರ್ಣವಾಗಿ ನಾಶವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನೋಟ್‌ಬ್ಯಾಂಕ್ ಘೋಷಣೆಯ ನಂತರ ಚಿತ್ರೀಕರಣ ತಂಡವು ಬೆಂಗಳೂರು ಕಡೆಗೆ ವಾಪಸ್ ತೆರಳಿದ್ದು, ಬಳಿಕ ತೋಟದ ಜಾಗವನ್ನು ಸರಿಪಡಿಸದೇ ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂಬ ಆರೋಪವಿದೆ. ತೋಟದ ಹಾನಿ ಸರಿಪಡಿಸಲು ಹಾಗೂ ನಷ್ಟವಾಗಿ ನೀಡಬೇಕಿದ್ದ ಸುಮಾರು 80 ಸಾವಿರ ರೂಪಾಯಿ ಹಣವನ್ನೂ ಪಾವತಿಸಿಲ್ಲ ಎಂದು ದೀಪಕ್ ಮಯೂರ್ ಪಟೇಲ್ ದೂರಿದ್ದಾರೆ.

ಚಿತ್ರೀಕರಣದಿಂದ ತಮಗೆ ಉಂಟಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿರುವ ದೀಪಕ್, ಈ ವಿಷಯದಲ್ಲಿ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾಗಿದ್ದಾರೆ. 2016ರಿಂದಲೂ ಚಿಕ್ಕಮಗಳೂರು ಎಸ್ಪಿ ಹಾಗೂ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣ ಹಿಂದೆ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದು, ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ದೂರುದಾರರು ಹೇಳಿದ್ದಾರೆ. ಮತ್ತೆ ಇದೇ ವರ್ಷದ ಜನವರಿ 16ರಂದು ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಹೊಸದಾಗಿ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ನಟ ಸುದೀಪ್ ಜೊತೆಗೆ ಧಾರಾವಾಹಿಯ ಕೋ-ಪ್ರೊಡ್ಯೂಸರ್‌ಗಳಾದ ಮಹೇಶ್ ಹಾಗೂ ಗಡ್ಡ ವಿಜಿ ಅವರ ಹೆಸರುಗಳನ್ನೂ ಉಲ್ಲೇಖಿಸಲಾಗಿದ್ದು, ಚಿತ್ರೀಕರಣದ ವೇಳೆ ಇವರು ಸ್ಥಳಕ್ಕೆ ಬಂದು ವ್ಯವಸ್ಥೆಗಳನ್ನು ನೋಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಬೈಗೂರು ಗ್ರಾಮದ ಸರ್ವೇ ನಂಬರ್ 275ರಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಧಾರಾವಾಹಿ ಚಿತ್ರೀಕರಣ ನಡೆದಿದ್ದು, ಆ ಜಾಗದಲ್ಲಿದ್ದ ಕಾಫಿ ಗಿಡಗಳನ್ನು ಕಿತ್ತುಹಾಕಿ ನಷ್ಟ ಉಂಟು ಮಾಡಲಾಗಿದೆ ಎಂದು ದೀಪಕ್ ಮಯೂರ್ ಪಟೇಲ್ ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಕ್ಕಾಗಿ ಮತ್ತೊಮ್ಮೆ ಅಧಿಕಾರಿಗಳ ಮೊರೆ ಹೋಗಿರುವ ಅವರು, ತಮಗೆ ಉಂಟಾದ ನಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ದೂರಿನ ಮೇಲೆ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

Must Read