ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅಭಿಪ್ರಾಯಗಳ ಕುರಿತು ಅವರು ಪಾಡ್‌ಕಾಸ್ಟ್‌ನಲ್ಲಿ ನೀಡಿರುವ ಹೇಳಿಕೆಗಳು ಮತ್ತು ಬಾಡಿ ಲ್ಯಾಂಗ್ವೇಜ್ ಬಗ್ಗೆ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು, ನ್ಯಾಯಾಲಯವು ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳದಿರುವುದು ಅದರ ಔದಾರ್ಯ ಎಂದು ಹೇಳಿದೆ.
ನ್ಯಾಯಾಲಯವು, ಬೀದಿ ನಾಯಿಗಳ ದಾಳಿಗಳಿಗೆ ನಾಯಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ ಹೇಳಿಕೆ ನೀಡಿರುವುದು ವ್ಯಂಗ್ಯವಾಗಿ ಅಲ್ಲ, ಗಂಭೀರವಾದುದು ಎಂದು ಸ್ಪಷ್ಟಪಡಿಸಿದೆ.
ಸ್ವಲ್ಪ ಸಮಯದ ಹಿಂದಷ್ಟೇ ನೀವು ನ್ಯಾಯಾಲಯಕ್ಕೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಹೇಳುತ್ತಿದ್ದಿರಿ. ನಿಮ್ಮ ಕಕ್ಷಿದಾರರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕಕ್ಷಿದಾರರು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಆದರೆ ನಾವು ಅದನ್ನು ಪರಿಗಣಿಸುತ್ತಿಲ್ಲ. ಅದೇ ನಮ್ಮ ಔದಾರ್ಯ. ನೀವು ಅವರ ಪಾಡ್‌ಕಾಸ್ಟ್ ಕೇಳಿದ್ದೀರಾ? ಅವರ ದೇಹಭಾಷೆ ಹೇಗಿದೆ? ಅವರು ಏನು ಹೇಳುತ್ತಾರೆ ಮತ್ತು ಅದನ್ನು ಹೇಗೆ ಹೇಳುತ್ತಾರೆ ಎಂಬುದನ್ನೂ ಗಮನಿಸಿದ್ದೀರಾ? ಎಂದು ಮೇನಕಾ ಗಾಂಧಿ ಅವರ ವಕೀಲ ರಾಜು ರಾಮಚಂದ್ರನ್ ಅವರಿಗೆ ನ್ಯಾಯಾಲಯ ಹೇಳಿದೆ.
ನ್ಯಾಯಾಲಯವು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ನೀವು ಹೇಳಿಕೆ ನೀಡಿದ್ದೀರಿ. ಆದರೆ ಮತ್ತೊಂದೆಡೆ, ನಿಮ್ಮ ಕಕ್ಷಿದಾರರು ತಮಗೆ ಇಷ್ಟವಾದ ಯಾರ ಮೇಲಾದರೂ ಹಾಗೂ ಯಾವುದರ ಕುರಿತಾದರೂ ಎಲ್ಲ ರೀತಿಯ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ ಎಂದು ಪೀಠ ಹೇಳಿದೆ.
ವಕೀಲರು ರೇಬೀಸ್ ನಿಯಂತ್ರಣ ಕ್ರಮಗಳು, ಲಸಿಕೆಗಳ ಲಭ್ಯತೆ ಹಾಗೂ ಬೀದಿ ನಾಯಿಗಳ ದಾಳಿಗಳನ್ನು ಎದುರಿಸಲು ವೃತ್ತಿಪರರ ಸಾಮರ್ಥ್ಯ ವೃದ್ಧಿಯ ಕುರಿತು ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನಿಮ್ಮ ಕಕ್ಷಿದಾರರು ಪ್ರಾಣಿಹಕ್ಕು ಹೋರಾಟಗಾರರು, ಅವರು ಕ್ಯಾಬಿನೆಟ್ ಸಚಿವೆಯೂ ಆಗಿದ್ದರು. ಹಾಗಾದರೆ ಈ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯವಾದ ಬಜೆಟ್ ಹಂಚಿಕೆಗಳಿಗೆ ನಿಮ್ಮ ಕಕ್ಷಿದಾರರು ನೀಡಿರುವ ಕೊಡುಗೆಗಳು ಏನು? ಎಂದು ಪ್ರಶ್ನಿಸಿದೆ.


