ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಸಂಭ್ರಮದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಸಿಬ್ಬಂದಿ ಜೊತೆ ಗುಜರಾತ್ನ ಕಚ್ ನಲ್ಲಿ ಇಂದು ಸಿಹಿ ವಿನಿಮಯ ಮಾಡಿಕೊಂಡು ಹಬ್ಬ ಆಚರಿಸಿದರು.
ಸೇನಾ ಸಮವಸ್ತ್ರ ಧರಿಸಿ ಗುಜರಾತ್ ನ ಕಚ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿರುವ ಭದ್ರತಾ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರಿಗೆ ಹಬ್ಬದ ಶುಭಾಶಯಗಳನ್ನು ಹೇಳುವ ಮೂಲಕ ಇಂದು ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು.
2014 ರಲ್ಲಿ ಪ್ರಧಾನ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನಿಯವರು ಪ್ರತಿವರ್ಷ ವಿವಿಧ ಸ್ಥಳಗಳಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ.
2014ರಲ್ಲಿ ಸಿಯಾಚಿನ್ನಿಂದ ಪ್ರಾರಂಭಿಸಿ, ನಂತರ ಪಂಜಾಬ್ನ ಗಡಿ, ಹಿಮಾಚಲ ಪ್ರದೇಶದ ಸುಮ್ಡೋ, ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್, ಉತ್ತರಾಖಂಡದ ಹರ್ಸಿಲ್, ಜಮ್ಮು ಮತ್ತು ಕಾಶ್ಮೀರದ ರಾಜೌರಿ, ರಾಜಸ್ಥಾನಗಳಲ್ಲಿ ಆಚರಿಸಿಕೊಂಡಿದ್ದರು. ಲೋಂಗೆವಾಲಾ, ಕಾಶ್ಮೀರದ ನೌಶೇರಾ, ಕಾರ್ಗಿಲ್ ಮತ್ತು ಕಳೆದ ವರ್ಷ ಹಿಮಾಚಲದ ಲೆಪ್ಚಾದಲ್ಲಿ ಸೈನಿಕರೊಂದಿಗೆ ದೀಪಾವಳಿ ಸಮಯ ಕಳೆದಿದ್ದರು.
2014 ರಲ್ಲಿ ಪ್ರಧಾನಿಯಾಗಿ ತಮ್ಮ ಮೊದಲ ದೀಪಾವಳಿ ಭೇಟಿಯಲ್ಲಿ, ಗಡಿಯಲ್ಲಿ ಸೈನಿಕರ ಸಮರ್ಪಣಾ ಮನೋಭಾವದಿಂದ ಭಾರತದ 125 ಕೋಟಿ ನಾಗರಿಕರು ನೆಮ್ಮದಿಯಿಂದ ಹಬ್ಬ ಆಚರಿಸುವಂತಾಗಿದೆ ಎಂದು ಮೋದಿ ಸಿಯಾಚಿನ್ನಲ್ಲಿ ಹೇಳಿದ್ದರು.
ಇನ್ನೊಂದೆಡೆ ಭಾರತ-ಚೀನಾ ಸೈನಿಕರು ಗಡಿ ವಾಸ್ತವ ರೇಖೆಯಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪಾಲ್ಗೊಂಡರು. ಸ್ಮಾರಕದ ಬಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಮೊದಲ ಗೃಹ ಸಚಿವರ ಜನ್ಮದಿನದ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.