ಭಾರತದ ಒಂದು ಇಂಚು ಭೂಮಿಯನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಒಂದು ಇಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಭಾರತ-ಪಾಕಿಸ್ತಾನ ಗಡಿಯ ಗುಜರಾತ್‌ನ ಕಚ್‌ ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಮಾತನಾಡಿದ ಅವರು, ಭಾರತವು ತನ್ನ ಗಡಿಭಾಗದಲ್ಲಿರುವ ಒಂದಿಂಚು ಭೂಮಿಯನ್ನು ಸಹ ಬಿಟ್ಟುಕೊಡುವುದಿಲ್ಲ, ನೆಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದು ಹೇಳಿದರು.

ನಾವು ನಮ್ಮ ಸೈನಿಕರ ದೃಢತೆಯನ್ನು ನಂಬುತ್ತೇವೆ ಹೊರತು ನಮ್ಮ ಶತ್ರುಗಳ ಮಾತನ್ನಲ್ಲ, ನಿಮ್ಮಿಂದ ದೇಶವು ಸುರಕ್ಷಿತವಾಗಿದೆ ಎಂದು ಭಾರತದ ಜನರು ಭಾವಿಸುತ್ತಿದ್ದಾರೆ ಎಂದರು.

21ನೇ ಶತಮಾನದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೇನೆ ಮತ್ತು ಭದ್ರತಾ ಪಡೆಗಳನ್ನು ಆಧುನಿಕ ಸಂಪನ್ಮೂಲಗಳೊಂದಿಗೆ ಸಜ್ಜುಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ಸರ್ಕಾರವು ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸಲು ಮುಂದಾಗಿದೆ. ಜತೆಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತಿದೆ. ನಾವಿಂದು ಅಭಿವೃದ್ಧಿ ಹೊಂದಿದ ಭಾರತ ಗುರಿಯನ್ನು ಸಾಧಿಸಲು ದಾಪುಗಾಲು ಇಡುತ್ತಿದ್ದೇವೆ. ನಮ್ಮ ಈ ಕನಸುಗಳನ್ನು ನೀವು ಕಾಪಾಡುತ್ತಿದ್ದೀರಿʼ ಎಂದು ಅವರು ಸೈನಿಕರ ಸೇವೆಯನ್ನು ಸ್ಮರಿಸಿದ್ದಾರೆ.

ಈ ಪ್ರದೇಶವು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಣ್ಗಾವಲಿನಲ್ಲಿದೆ. ಪಾಕಿಸ್ತಾನದಿಂದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರು ಆಗಾಗ್ಗೆ ಭಾರತಕ್ಕೆ ನುಸುಳಲು ಪ್ರಯತ್ನಿಸುವ ಪ್ರದೇಶ ಇದು. ಆದಾಗ್ಯೂ ಜಾಗರೂಕ ಬಿಎಸ್‌ಎಫ್ ಪ್ರತಿ ಬಾರಿಯೂ ಅವರ ದುಷ್ಕೃತ್ಯಗಳನ್ನು ವಿಫಲಗೊಳಿಸಿದೆ. ಸವಾಲಿನ ನಡುವೆಯೂ ಗಡಿಯನ್ನು ಸುರಕ್ಷಿತವಾಗಿ ಕಾಯುತ್ತಿರುವ, ದೇಶವನ್ನು ದುಷ್ಕರ್ಮಿಗಳು ನುಸುಳದಂತೆ ಕಾಯುವ ಬಿಎಸ್‌ಎಫ್‌ ಯೋಧರ ಕಾರ್ಯವನ್ನು ಮೋದಿ ಶ್ಲಾಘಿಸಿದರು.

ಪ್ರಧಾನಿ ಮೋದಿ ಸೈನಿಕರೊಂದಿಗೆ ಸಮಾಲೋಚನೆ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. ಅವರ ಕೆಲಸವನ್ನು ಸುಲಭಗೊಳಿಸಲು ಯಾವುದಾದರೂ ಬದಲಾವಣೆಗಳನ್ನು ತರುವ ಅಗತ್ಯವಿದೆಯೇ ಪ್ರಶ್ನಿಸಿದರು. ಭುಜ್‌ಗೆ ತೆರಳುವ ಮೊದಲು ಮೋದಿ ಕೊಲ್ಲಿ ಪ್ರದೇಶವನ್ನು ಖುದ್ದಾಗಿ ಪರಿಶೀಲಿಸಿದರು. ಸುಮಾರು ಒಂದು ಗಂಟೆ ಅಲ್ಲಿಯೇ ಕಾಲ ಕಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!