ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಬೋಡೋ ಮತ್ತು ಆದಿವಾಸಿ ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಇದರಿಂದ ಸ್ಥಳದಲ್ಲಿ ಕ್ಷಿಪ್ರ ಕಾರ್ಯ ಪಡೆ(RAF) ನಿಯೋಜಿಸಲಾಗಿದ್ದು, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೋಮವಾರ ತಡರಾತ್ರಿ ಕರಿಗಾಂವ್ ಪೊಲೀಸ್ ಹೊರಠಾಣೆ ವ್ಯಾಪ್ತಿಯ ಮಾನ್ಸಿಂಗ್ ರಸ್ತೆಯಲ್ಲಿ ಮೂವರು ಬೋಡೋ ಪುರುಷರು ತೆರಳುತ್ತಿದ್ದ ವಾಹನವು ಇಬ್ಬರು ಆದಿವಾಸಿ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದ ನಂತರ ಹಿಂಸಾಚಾರ ಭುಗಿಲೆದ್ದಿದೆ.
ಮೂವರು ನಿವಾಸಿಗಳ ಮೇಲೆ ಹತ್ತಿರದ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಮತ್ತು ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಎರಡೂ ಸಮುದಾಯಗಳ ಸದಸ್ಯರು ಕರಿಗಾಂವ್ ಹೊರಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ, ಕೆಲವು ಮನೆಗಳಿಗೂ ಬೆಂಕಿ ಹಚ್ಚಿದ್ದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಸರ್ಕಾರಿ ಕಚೇರಿಗೂ ಬೆಂಕಿ ಹಚ್ಚಲಾಯಿತು ಮತ್ತು ಕರಿಗಾಂವ್ ಪೊಲೀಸ್ ಹೊರಠಾಣೆ ಮೇಲೆ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡದಂತೆ ತಡೆಯಲು ಪ್ರದೇಶದಲ್ಲಿ RAF ಅನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರವು ಕೊಕ್ರಜಾರ್ ಮತ್ತು ಪಕ್ಕದ ಚಿರಾಂಗ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.


