ದೀಪಾವಳಿ ಸಮಯ ಪಟಾಕಿ ಸಿಡಿಸಿ ಸಂಭ್ರಮ: ರಾಜ್ಯ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಿಸಿದ್ದು, ಇದೀಗ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕುಸಿತವಾಗಿದೆ.

ನಿಯಮ ಉಲ್ಲಂಘಿಸಿ ಪಟಾಕಿ ಸಿಡಿತದ ಪರಿಣಾಮ ಬಾಪುಜಿನಗರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಹೆಬ್ಬಾಳ, ಹೊಂಬೇಗೌಡ ನಗರ, ಜಯನಗರ, ಜಿಗಣಿ, ಕಸ್ತೂರಿನಗರ, ಮಲ್ಲಸಂದ್ರ, ಸಾನೇಗುರುವಹಳ್ಳಿ, ಶಿವಪುರ, ಸಿಲ್ಕ್​ ಬೋರ್ಡ್​ ಮೈಸೂರು ರಸ್ತೆ ಸೇರಿ ನಗರದ ಇತರೆ ಬಡಾವಣೆಗಳು ಅಧಿಕ ಮಲಿನವಾಗಿದೆ.

ಪ್ರತಿ ನ ಮೀಟರ್​ ಗಾಳಿಯಲ್ಲಿ 2.5 ಮೈಕ್ರಾನ್​ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಶೇ.50 ಇದ್ದರೆ, ಗಾಳಿಯ ಗುಣಮಟ್ಟ ಉತ್ತಮವೆಂದು ಕರೆಯಲಾಗುತ್ತದೆ. ಆದರೆ, ಈ ಕಣಗಳ ಸಂಖ್ಯೆ ಹೆಚ್ಚಿದ್ದರೆ ಅಪಾಯಕಾರಿ, 401ರಿಂದ 500ವರೆಗೆ ಕಣಗಳ ಸಂಖ್ಯೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗಿಕರಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಗಾಳಿ ಗುಣಮಟ್ಟ ಕಳಪೆ ಹಂತಕ್ಕೆ ತಲುಪಿದೆ. ಆದರೆ, ದೆಹಲಿಯಲ್ಲಿ ಗಾಳಿಯ ಗುಣಮುಟ್ಟ ತೀವ್ರವಾಗಿ ಹದಗೆಟ್ಟಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್​ಪಿಸಿಬಿ) ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿತ್ತು. ಸುಪ್ರೀಂ ಕೋರ್ಟ್​ ಆದೇಶದನ್ವಯ ಅ.31ರಿಂದ ನ.2ರವರೆಗೆ ಪ್ರತಿನಿತ್ಯ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಪಟಾಕಿಗಳ ಮಾರಾಟ ಮತ್ತು ಬಳಕೆ ಕುರಿತು ಸುಪ್ರೀಂ ಕೋರ್ಟ್​ ನೀಡಿರುವ ಸ್ಪಷ್ಟ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿಪಡಿಸಿದ ಸಮಯದಲ್ಲೇ ಪಟಾಕಿ ಸಿಡಿಸಬೇಕು. ಉಳಿದ ಸಮಯದಲ್ಲಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು. ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದ ಪರಿಣಾಮ ಗುರುವಾರದಿಂಧ ಗಾಳಿ ಗುಣಮಟ್ಟ ಸೂಚ್ಯಂಕ 100ರ ಗಡಿ ದಾಟಿದೆ. ತಿಂಗಳಿಂದ ಮಾಲಿನ್ಯ ಪ್ರಮಾಣ ಕಡಿಮೆ ಇತ್ತು. ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!