ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಭಾರತೀಯ ಮೂಲದ ಅಪ್ರತಿಮ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಡಿಸೆಂಬರ್ 31ರಂದು ನಾಸಾದ ವೃತ್ತಿಜೀವನದಿಂದ ನಿವೃತ್ತಿ ಹೊಂದಿದ್ದಾರೆ. ತಮ್ಮ ಕೊನೆಯ ಬಾಹ್ಯಾಕಾಶ ಪ್ರಯಾಣದಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಭೂಮಿಗೆ ಮರಳಿರುವ ಅವರು, ಈಗ ಭಾರತಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಕೇವಲ ಒಂದು ವಾರದ ಸಂಶೋಧನಾ ಕಾರ್ಯಕ್ಕಾಗಿ ‘ಸ್ಟಾರ್‌ಲೈನರ್’ ಕ್ಯಾಪ್ಸುಲ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅನಿರೀಕ್ಷಿತ ತಾಂತ್ರಿಕ ದೋಷದಿಂದಾಗಿ ಅಲ್ಲಿಯೇ ಸಿಲುಕಿಕೊಳ್ಳಬೇಕಾಯಿತು. ನೌಕೆಯಲ್ಲಿನ ಸಣ್ಣದೊಂದು ಮಿಸ್ಟೇಕ್ ಅವರನ್ನು ಬರೋಬ್ಬರಿ 286 ದಿನಗಳ ಕಾಲ ಭೂಮಿಯಿಂದ 400 ಕಿ.ಮೀ ಎತ್ತರದಲ್ಲಿ ಉಳಿಯುವಂತೆ ಮಾಡಿತು. ಹಲವಾರು ಪ್ರಯತ್ನಗಳ ನಂತರ ಯಶಸ್ವಿಯಾಗಿ ಭೂಮಿಗೆ ಮರಳಿದ ಅವರು, ತಮ್ಮ ಸುರಕ್ಷತೆಗಾಗಿ ಪ್ರಾರ್ಥಿಸಿದ ಭಾರತದ ಜನತೆಗೆ ಕೃತಜ್ಞತೆ ಸಲ್ಲಿಸಲು ಭಾರತಕ್ಕೆ ಆಗಮಿಸಿದ್ದಾರೆ.
ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಜನನ. ಇವರ ತಂದೆ ಮೂಲತಃ ಗುಜರಾತ್‌ನ ನರಶಸ್ತ್ರಚಿಕಿತ್ಸಕ ಡಾ. ದೀಪಕ್ ಪಾಂಡ್ಯ. 1987 ರಲ್ಲಿ ಯುಎಸ್ ನೇವಲ್ ಅಕಾಡೆಮಿಯಿಂದ ಭೌತ ವಿಜ್ಞಾನದಲ್ಲಿ ಪದವಿ ಹಾಗೂ 1995 ರಲ್ಲಿ ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅಮೆರಿಕದ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ನಂತರ ನಾಸಾದ ಅತ್ಯಂತ ಯಶಸ್ವಿ ಗಗನಯಾತ್ರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಬಾಹ್ಯಾಕಾಶ ನಡಿಗೆ ಮತ್ತು ಸುದೀರ್ಘ ಬಾಹ್ಯಾಕಾಶ ಪ್ರಯಾಣದಲ್ಲಿ ದಾಖಲೆ ಬರೆದ ಸುನೀತಾ ವಿಲಿಯಮ್ಸ್, ನಿವೃತ್ತಿಯ ನಂತರವೂ ಯುವ ಪೀಳಿಗೆಗೆ ಮತ್ತು ವಿಶೇಷವಾಗಿ ಭಾರತೀಯ ಹೆಣ್ಣುಮಕ್ಕಳಿಗೆ ದೊಡ್ಡ ಸ್ಪೂರ್ತಿಯಾಗಿದ್ದಾರೆ.


