ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಮನಸ್ಥಿತಿಯ ಯುವಕನೊಬ್ಬನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಅಮಲ್ (23) ಬಂಧಿತ ಆರೋಪಿಯಾಗಿದ್ದು, ಈತನ ವಿಚಿತ್ರ ಮತ್ತು ಅಸಹ್ಯಕರ ನಡವಳಿಕೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಹೆಬ್ಬಗೋಡಿಯ ವಿದ್ಯಾನಗರದಲ್ಲಿ ವಾಸವಿದ್ದ ಅಮಲ್, ಹಗಲಿನಲ್ಲಿ ಸುತ್ತಾಡಿ ಯಾವ ಮನೆಯ ಆವರಣದಲ್ಲಿ ಅಥವಾ ಮಹಡಿಯ ಮೇಲೆ ಮಹಿಳೆಯರ ಒಳ ಉಡುಪುಗಳನ್ನು ಒಣಗಿಸಿ ಹಾಕಲಾಗಿದೆ ಎಂಬುದನ್ನು ಗಮನಿಸುತ್ತಿದ್ದ. ನಂತರ ಜನರಿಲ್ಲದ ಸಮಯ ನೋಡಿ ಅವುಗಳನ್ನು ಕಳ್ಳತನ ಮಾಡುತ್ತಿದ್ದ.
ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಅಮಲ್ ಕೇವಲ ಬಟ್ಟೆಗಳನ್ನು ಕದಿಯುವುದು ಮಾತ್ರವಲ್ಲದೆ, ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ತನ್ನ ಮೊಬೈಲ್‌ನಲ್ಲಿ ಇಂತಹ ಹಲವಾರು ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡು ವಿಕೃತ ಆನಂದ ಪಡುತ್ತಿದ್ದ ಎನ್ನಲಾಗಿದೆ.
ಪೊಲೀಸರು ಈತನ ವಾಸಸ್ಥಳದ ಮೇಲೆ ದಾಳಿ ನಡೆಸಿದಾಗ ಕಳ್ಳತನ ಮಾಡಲಾಗಿದ್ದ ನೂರಾರು ಒಳ ಉಡುಪುಗಳು ಪತ್ತೆಯಾಗಿವೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


