ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಶಾಕ್ ನೀಡುವಂತೆ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿರುವ ಚಿನ್ನದ ದರವು ಇಂದು ಹೊಸ ದಾಖಲೆ ಬರೆದಿದೆ.
ಕೇವಲ 24 ಗಂಟೆಗಳ ಅವಧಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 690 ರೂಪಾಯಿ ಹೆಚ್ಚಳವಾಗಿದ್ದು, ಒಟ್ಟಾರೆಯಾಗಿ ಕಳೆದ ಕೆಲವು ದಿನಗಳಲ್ಲಿ ಸುಮಾರು 7,000 ರೂಪಾಯಿಯಷ್ಟು ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆಗಳ ಎಫೆಕ್ಟ್ ಭಾರತದ ಮೇಲೂ ಬೀರಿದ್ದು, ಪ್ರತಿ ಗ್ರಾಂ ಚಿನ್ನಕ್ಕೆ ಕಳೆದ ಮೂರು ದಿನದಲ್ಲಿ 1,000 ರೂಪಾಯಿ ಹೆಚ್ಚಾಗಿದೆ.
ಇಂದಿನ ಮಾರುಕಟ್ಟೆ ದರ ಹೀಗಿದೆ:
22 ಕ್ಯಾರಟ್ ಆಭರಣ ಚಿನ್ನ: 10 ಗ್ರಾಂಗೆ 1,41,900 ರೂಪಾಯಿ.
24 ಕ್ಯಾರಟ್ ಅಪರಂಜಿ ಚಿನ್ನ: 10 ಗ್ರಾಂಗೆ 1,54,800 ರೂಪಾಯಿ.
ಬಂಗಾರದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆಯೂ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಬುಧವಾರ ಪ್ರತಿ 100 ಗ್ರಾಂ ಬೆಳ್ಳಿಗೆ 10 ರೂಪಾಯಿ ಏರಿಕೆಯಾಗಿದ್ದು, ಮೂರು ದಿನಗಳಲ್ಲಿ ಒಟ್ಟು 30 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 32,500 ರೂಪಾಯಿ ಇದ್ದರೆ, ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ಇದು 34,000 ರೂಪಾಯಿ ಗಡಿ ತಲುಪಿದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಏರುಪೇರುಗಳು ಮತ್ತು ಬೇಡಿಕೆಯ ಹೆಚ್ಚಳದಿಂದಾಗಿ ಈ ಬೆಲೆ ಏರಿಕೆ ಸಂಭವಿಸಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.


