January22, 2026
Thursday, January 22, 2026
spot_img

ನಿತಿನ್ ನಬಿನ್ ನಾಯಕತ್ವದಲ್ಲಿ ಎನ್‌ಡಿಎ ಮತ್ತಷ್ಟು ಬಲಿಷ್ಠ: ಬೀದರ್‌ನಲ್ಲಿ ಕೇಸರಿ ಪಡೆ ಸಂಭ್ರಮ

ಹೊಸದಿಗಂತ ಬೀದರ್

ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ನವದೆಹಲಿಯಲ್ಲಿ ಮಂಗಳವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಈ ಸಂಭ್ರಮದ ಅಂಗವಾಗಿ ಬೀದರ್ ನಗರದ ಶಿವಾಜಿ ವೃತ್ತದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಅದ್ಧೂರಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ನಗರ ಅಧ್ಯಕ್ಷರಾದ ಶಶಿ ಹೊಸಳ್ಳಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಸಂತೋಷ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ನೂತನ ಅಧ್ಯಕ್ಷ ನಿತಿನ್ ನಬಿನ್ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಶಿ ಹೊಸಳ್ಳಿ ಅವರು, “ನಿತಿನ್ ನಬಿನ್ ಅವರ ಸಂಘಟನಾ ಚಾತುರ್ಯವು ಬಿಜೆಪಿಯನ್ನು ತಳಮಟ್ಟದಿಂದ ಇನ್ನಷ್ಟು ಗಟ್ಟಿಗೊಳಿಸಲಿದೆ. ಅವರ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ಬಲಿಷ್ಠವಾಗಲಿದ್ದು, ಮುಂಬರುವ ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಅಭೂತಪೂರ್ವ ಜಯ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಬುಡಾ ಅಧ್ಯಕ್ಷ ಬಾಬುವಾಲಿ ಮಾತನಾಡಿ, “ಐದು ಬಾರಿ ಶಾಸಕರಾಗಿ, ಬಿಹಾರದ ಸಚಿವರಾಗಿ ಸೇವೆ ಸಲ್ಲಿಸಿರುವ ನಬಿನ್ ಅವರು ಪಕ್ಷದ ಇತಿಹಾಸದಲ್ಲೇ ಅತ್ಯಂತ ಕಿರಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರ ಸಾರ್ವಜನಿಕ ಜೀವನ ಮತ್ತು ರಾಜಕೀಯ ಅನುಭವವು ಯುವ ಕಾರ್ಯಕರ್ತರಿಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು.

ಈ ವಿಜಯೋತ್ಸವದಲ್ಲಿ ಹಿರಿಯ ಮುಖಂಡರಾದ ನಂದಾಕಿಶೋರ ವರ್ಮಾ, ಗುರುನಾಥ ಜಂತಿಕರ್, ವೆಂಕಟರಾವ್ ದೇಶಪಾಂಡೆ, ರಾಜರಾಮ ಚಿಟ್ಟಾ, ಗಣೇಶ್ ಭೋಸ್ಲೆ, ಸುನಿಲ್ ಗೌಳಿ, ರೋಷನ್ ವರ್ಮಾ, ನಿತಿನ್ ನವಲಕಲೆ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸಂಭ್ರಮಿಸಿದರು.

Must Read