January21, 2026
Wednesday, January 21, 2026
spot_img

ಪ್ರಯಾಗ್‌ರಾಜ್‌ನಲ್ಲಿ ವಾಯುಪಡೆ ವಿಮಾನ ಪತನ: ಪವಾಡ ಸದೃಶವಾಗಿ ಪಾರಾದ ಪೈಲಟ್‌ಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ತರಬೇತಿ ವಿಮಾನವೊಂದು ಇಂದು ಮಧ್ಯಾಹ್ನ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಈ ತರಬೇತಿ ವಿಮಾನ ಹಾರಾಟ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ವಿಮಾನವು ಪ್ರಯಾಗ್‌ರಾಜ್‌ನ ಪ್ರಸಿದ್ಧ ಸಂಗಮದಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಕೆರೆಯೊಂದಕ್ಕೆ ಪತನಗೊಂಡಿದೆ. ಬಿದ್ದ ರಭಸಕ್ಕೆ ವಿಮಾನವು ನೀರಿನಲ್ಲಿ ಮುಳುಗಡೆಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಯಶಸ್ವಿಯಾಗಿ ಕೆರೆಯಿಂದ ಹೊರತೆಗೆಯಲಾಗಿದ್ದು, ಸದ್ಯ ಅವರು ಸುರಕ್ಷಿತವಾಗಿದ್ದಾರೆ. ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಾಯುಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಾಂತ್ರಿಕ ದೋಷದ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜನವಸತಿ ಪ್ರದೇಶದ ಬದಲಿಗೆ ಕೆರೆಯಲ್ಲಿ ವಿಮಾನ ಬಿದ್ದಿರುವುದರಿಂದ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದಂತಾಗಿದೆ.

Must Read