January21, 2026
Wednesday, January 21, 2026
spot_img

SHOCKING | ಮದುವೆಗೂ ಮುನ್ನ ಹುಟ್ಟಿದ ಮಗು, ಕೋಪದಲ್ಲಿ ಕಂದಮ್ಮನ ಕುತ್ತಿಗೆ ಹಿಸುಕಿದ ಅಜ್ಜಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆರಿಗೆಯಾದ ತಕ್ಷಣ ಹಸುಗೂಸು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಬಾವಿಕೆರೆ ಗ್ರಾಮದ ಸ್ಟಾಫ್ ನರ್ಸ್ ಒಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮದುವೆಗೆ ಮುನ್ನವೇ ಯುವತಿ ತಾಯಿಯಾಗಿದ್ದರಿಂದ ಮರ್ಯಾದೆಗೆ ಅಂಜಿ ಕುಟುಂಬಸ್ಥರೇ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಲಕ್ಕವಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದ್ದು, ಮರ್ಯಾದೆ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಆದರೆ ಕಳೆದ 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋದರೆ ವಿಷಯ ಬಹಿರಂಗವಾಗುತ್ತದೆ ಎಂಬ ಭಯಕ್ಕೆ ನರ್ಸ್ ಆಗಿದ್ದ ಯುವತಿ, ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಆದರೆ, ಹುಟ್ಟಿದ ತಕ್ಷಣ ಮಗು ಸಾವನ್ನಪ್ಪಿದೆ. ಹೀಗಾಗಿ ಮರ್ಯಾದೆ ಹೆದರಿ ಮಗುವನ್ನು ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.

ಮಗು ಮೃತಪಟ್ಟ ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ತಿಪ್ಪೆಯ ಗುಂಡಿಯಲ್ಲಿ ಹೂತು ಹಾಕಲಾಗಿದೆ. ಆದರೆ, ಇದನ್ನು ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕ ನೋಡಿದ್ದು, ಏನೋ ಹೂತು ಹಾಕಿರುವ ಬಗ್ಗೆ ಯುವಕನಿಗೆ ಅನುಮಾನ ಮೂಡಿದೆ. ಬಳಿಕ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಕೂಡಲೇ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ತಿಪ್ಪೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಸದ್ಯ ಪೊಲೀಸರು ಹಸುಗೂಸಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮಗು ಸಹಜವಾಗಿಯೇ ಉಸಿರುಗಟ್ಟಿ ಸಾವನ್ನಪ್ಪಿದೆಯೋ ಅಥವಾ ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿದ್ದಾರೋ ಎನ್ನುವುದು ಗೊತ್ತಾಗಲಿದೆ. ಇನ್ನು ಅನುಮಾಸ್ಪದ ಸಾವು ಎಂದು ಪ್ರಕರಣ ದಾಖಲಸಿಕೊಂಡಿರುವ ಪೊಲೀಸರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ.

Must Read