January21, 2026
Wednesday, January 21, 2026
spot_img

ದೇವಾಲಯಗಳ ಪುನರುಜ್ಜೀವನ ಆಗಬೇಕು, ಯಾಕೆಂದು ವಿವರಿಸಿದ ಯದುವೀರ ಒಡೆಯರ್

ಹೊಸದಿಗಂತ ವರದಿ ಚಿತ್ರದುರ್ಗ:

ದೇವರ ಆರಾಧನೆ ನೆಪದಲ್ಲಿ ಜನರಿಗೆ ರಕ್ಷಣೆ ನೀಡಲಾಗುತ್ತಿದೆ. ಆ ಮೂಲಕ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಈ ಹಿನ್ನೆಲೆಯಲ್ಲಿ ದೇವಾಲಯಗಳ ಪುನರುಜ್ಜಿವನ ಆಗಬೇಕಿದೆ ಎಂದು ಮೈಸೂರು ಮತ್ತು ಕೊಡಗು ಕ್ಷೇತ್ರ ಸಂಸದರು ಹಾಗೂ ಮೈಸೂರು ಸಂಸ್ಥಾನದ ವಂಶಸ್ಥರಾದ ಯದುವೀರ ಕೃಷ್ಣದತ್ತ ಒಡೆಯರ್ ಹೇಳಿದರು.

ನಗರದ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಆದಿಶಕ್ತಿ ಶ್ರೀ ಮಾತಂಗೇಶ್ವರಿ ದೇಗುಲದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಗೂ ಮೈಸೂರು ಅರಮನೆಗೂ ಅವಿನಭಾವ ಸಂಬಂಧವಿದೆ. ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಜನತೆಯ ಕಲ್ಯಾಣಕ್ಕಾಗಿ ಎರಡು ಕಡೆಗಳಲ್ಲಿ ಜಲಾಶಯಗಳನ್ನು ನಿರ್ಮಿಸಿದ್ದಾರೆ. ಇದರಿಂದ ಎಷ್ಟೋ ಜನರ ಬದುಕು ಹಸನಾಗಿದೆ ಎಂದರು.

ಹಿಂದುಳಿದ ಜನಾಂಗಕ್ಕೆ ಅನ್ಯಾಯವಾದಾಗ ಅಲ್ಲಿ ಮಹಾರಾಜರು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಶೋಷಿತರಿಗೆ ಮೀಸಲಾತಿ ನೀಡಿ ಅವರು ಮುಖ್ಯವಾಹಿನಿಗೆ ಬರಲು ನೆರವಾದರು. ಇದಲ್ಲದೇ ಮಹರಾಜರು ಸಂವಿಧಾನ ರೂಪುರೇಷೆಗಳನ್ನು ತಪ್ಪದೇ ಜಾರಿ ಮಾಡಿದ್ದರು. ಸಂವಿಧಾನದ ಆಚರಣೆಯ ಮೂಲಕ ಭಾರತ ಮಾತೆಯ ಆರಾಧನೆ ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಎಲ್ಲಾ ಬದಲಾವಣೆ ಆಗುವಂತೆ ಸಂವಿಧಾನದಲ್ಲಿಯೂ ಸಹ ತಿದ್ದುಪಡಿ ಮಾಡಿ ಇಂದಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಜಾರಿ ಮಾಡಬೇಕಿದೆ ಎಂದು ಅಭಿಪರಾಯಪಟ್ಟರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ನೀವು ಯಾವುದೇ ಪಕ್ಷದಲ್ಲಿರಿ. ಆದರೆ ಸಮಾಜಕ್ಕೆ ಧಕ್ಕೆ ಬಂದಾಗ ಎಲ್ಲರೂ ಒಂದಾಗಬೇಕು. ನಮ್ಮ ಸಮಾಜಕ್ಕೆ ಮಠದ ಮಾರ್ಗದರ್ಶನದ ಅಗತ್ಯವಿದೆ. ಎಲ್ಲರೂ ಸೇರಿ ದೇವಾಲಯ ನಿರ್ಮಾಣ ಮಾಡಬೇಕು. ಇದಕ್ಕೆ ಶ್ರೀಗಳು ಯಾರಿಂದಲೂ ಹಣ ಕೇಳಬಾರದು. ಇದರ ಪೂರ್ಣ ಪ್ರಮಾಣದ ವೆಚ್ಚವನ್ನು ಭಕ್ತರೇ ನಿರ್ವಹಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ತನು, ಮನ, ಧನ ಅರ್ಪಿಸುವ ಮೂಲಕ ಮುಂದಿನ ೧೧ ತಿಂಗಳೊಳಗಾಗಿ ದೇವಾಲಯ ನಿರ್ಮಿಸಬೇಕು. ಮಾಘ ಮಾಸದಲ್ಲಿ ಉದ್ಘಾಟನೆ ಮಾಡಬೇಕು ಎಂದರು.

Must Read