ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಜಂಟಿ ಅಧಿವೇಶನದ ಭಾಷಣದ ವಿಚಾರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ರಾಜ್ಯ ಸರ್ಕಾರದ ನಡುವಿನ ಶೀತಲ ಸಮರ ಈಗ ಕಾನೂನು ಸಮರದ ರೂಪ ಪಡೆದುಕೊಳ್ಳುತ್ತಿದೆ.
ಸರ್ಕಾರ ಸಿದ್ಧಪಡಿಸಿದ ಭಾಷಣದ ಪೈಕಿ 11 ಪ್ರಮುಖ ಪ್ಯಾರಾಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ, ಹೈಕಮಾಂಡ್ ಜೊತೆ ಚರ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಾಷಣದಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. “ಇದು ರಾಜ್ಯಪಾಲರ ವೈಯಕ್ತಿಕ ಭಾಷಣವಲ್ಲ, ಬದಲಾಗಿ ಸರ್ಕಾರದ ನೀತಿ-ನಿಲುವುಗಳನ್ನು ಪ್ರತಿಬಿಂಬಿಸುವ ಭಾಷಣ. ಸಂವಿಧಾನದ ಪ್ರಕಾರ ಅವರು ಇದನ್ನು ಓದಲೇಬೇಕು” ಎಂಬುದು ಸರ್ಕಾರದ ವಾದ.
ಇಂದು ಬೆಳಿಗ್ಗೆ 11:15ರ ವರೆಗೆ ರಾಜ್ಯಪಾಲರ ಆಗಮನಕ್ಕಾಗಿ ಕಾದು ನೋಡಲು ಸರ್ಕಾರ ನಿರ್ಧರಿಸಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ರಾಜ್ಯಪಾಲರು ಬರದಿದ್ದರೆ ಅಥವಾ ಭಾಷಣ ಓದಲು ನಿರಾಕರಿಸಿದರೆ, ಕೇವಲ ಒಂದು ಗಂಟೆಯೊಳಗೆ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠದಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ದೆಹಲಿಗೆ ತೆರಳುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪೊನ್ನಣ್ಣ ಅವರು, “ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಗುರುವಾರ ಬೆಳಿಗ್ಗೆ 10:15ಕ್ಕೆ ನಾವೇ ಅವರನ್ನು ಅಧಿವೇಶನಕ್ಕೆ ಬರಮಾಡಿಕೊಳ್ಳಲಿದ್ದೇವೆ. ಅವರು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಾರೆ ಮತ್ತು ಅಧಿವೇಶನಕ್ಕೆ ಬಂದೇ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ರಾಜ್ಯಪಾಲರು ಸರ್ಕಾರದ ಭಾಷಣವನ್ನು ಯಥಾವತ್ತಾಗಿ ಓದುತ್ತಾರೆಯೇ ಅಥವಾ ರಾಜ್ಯ ರಾಜಕಾರಣದಲ್ಲಿ ಹೊಸ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆಯೇ ಎಂಬ ಕುತೂಹಲ ಮನೆಮಾಡಿದೆ.


