January22, 2026
Thursday, January 22, 2026
spot_img

ರಾಜ್ಯಪಾಲರ ‘ಒಂದೆರಡು ಸಾಲಿನ’ ಭಾಷಣ: ವಿಧಾನಸಭೆಯಲ್ಲಿ ಹೈಡ್ರಾಮಾ, ಕಾಂಗ್ರೆಸ್ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ನರೇಗಾ ಯೋಜನೆ ಹೆಸರು ಬದಲಾವಣೆ ವಿಚಾರವಾಗಿ ಕರ್ನಾಟಕ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನವು ಇಂದು ಅಭೂತಪೂರ್ವ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಯಿತು. ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಅವರು ಸರ್ಕಾರದ ಸುದೀರ್ಘ ಭಾಷಣದ ಪ್ರತಿಯನ್ನು ಓದದೆ, ಕೇವಲ ಒಂದೆರಡು ಸಾಲುಗಳಲ್ಲಿ ಶುಭಾಶಯ ಕೋರಿ ನಿರ್ಗಮಿಸುವ ಮೂಲಕ ಸರ್ಕಾರಕ್ಕೆ ಅನಿರೀಕ್ಷಿತ ಶಾಕ್ ನೀಡಿದ್ದಾರೆ.

ನರೇಗಾ ಹೆಸರು ಬದಲಾವಣೆ ವಿರೋಧಿಸಿ ಆಯೋಜಿಸಲಾದ ಈ ಅಧಿವೇಶನದಲ್ಲಿ ಓದಲು ಸರ್ಕಾರ 11 ಪ್ರಮುಖ ಅಂಶಗಳನ್ನೊಳಗೊಂಡ ಭಾಷಣದ ಪ್ರತಿಯನ್ನು ಸಿದ್ಧಪಡಿಸಿತ್ತು. ಆದರೆ, ಈ ಪೈಕಿ 11 ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಬುಧವಾರವೇ ಸೂಚನೆ ನೀಡಿದ್ದರು. ಇದಕ್ಕೆ ಸರ್ಕಾರ ಮಣಿಯದ ಕಾರಣ, ರಾಜ್ಯಪಾಲರು ಅಧಿವೇಶನಕ್ಕೆ ಬರುವುದೇ ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಒಂದು ವೇಳೆ ಅವರು ಬರದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೂಡ ಸಿದ್ದರಾಮಯ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು.

ಎಲ್ಲಾ ಕುತೂಹಲಗಳ ನಡುವೆ ಸದನಕ್ಕೆ ಆಗಮಿಸಿದ ರಾಜ್ಯಪಾಲರು, ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಒಂದೆರಡು ಸಾಲುಗಳನ್ನು ಮಾತ್ರ ಓದಿದರು. ಸರ್ಕಾರದ ನಿಲುವನ್ನು ಪ್ರತಿಬಿಂಬಿಸುವ ಯಾವುದೇ ಅಂಶಗಳನ್ನು ಉಲ್ಲೇಖಿಸದೆ, ಕೇವಲ ಔಪಚಾರಿಕವಾಗಿ ಶುಭಾಶಯ ತಿಳಿಸಿ ಅಲ್ಲಿಂದ ಹೊರನಡೆದರು.

ರಾಜ್ಯಪಾಲರ ಈ ನಡೆ ಆಡಳಿತ ಪಕ್ಷದ ಶಾಸಕರನ್ನು ಕೆರಳಿಸಿತು. ಅವರು ಸದನದಿಂದ ನಿರ್ಗಮಿಸುತ್ತಿದ್ದಂತೆ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ತಡೆಯಲು ಯತ್ನಿಸಿದರು. ಕಾಂಗ್ರೆಸ್ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ವಿಧಾನಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಹೈಡ್ರಾಮಾ ನಡೆಯಿತು.

Must Read