January22, 2026
Thursday, January 22, 2026
spot_img

ರಾಜ್ಯಪಾಲರಿಗೆ ಅಗೌರವ ತೋರಿದ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ: ಸ್ಪೀಕರ್‌ಗೆ ಆರ್‌.ಅಶೋಕ್ ಪತ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಶೇಷ ಅಧಿವೇಶನದಲ್ಲಿ ರಾಜ್ಯ ಸರಕಾರ ರಾಜ್ಯಪಾಲರಿಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಮಾನ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಅಧಿವೇಶನದ ದಿನವನ್ನು ಕರಾಳ ದಿನವನ್ನಾಗಿಸಿದೆ. ರಾಜ್ಯಪಾಲರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಸಾಂಕೇತಿಕವಾಗಿ ಭಾಷಣ ಮಂಡಿಸಿ ಧನ್ಯವಾದ ಹೇಳಿ ಹೋಗಿದ್ದಾರೆ. ಹಿಂದೆ ಹಂಸರಾಜ್‌ ಭಾರಧ್ವಾಜ್‌ ಕೂಡ ಹಾಗೆಯೇ ಮಾಡಿದ್ದರು. ಇದರಲ್ಲಿ ತಪ್ಪೇನೂ ಇಲ್ಲ. ಸಂವಿಧಾನದ ಪ್ರಕಾರ ಸದನಕ್ಕೆ ಬಂದು ಸಾಂಕೇತಿಕ ಭಾಷಣ ಮಂಡಿಸಿ ಧನ್ಯವಾದ ಹೇಳುವ ಅವಕಾಶ ಇದ್ದೇ ಇದೆ. ಆದರೆ ಕಾಂಗ್ರೆಸ್‌ ಶಾಸಕರು ಗೂಂಡಾಗಿರಿ ಮಾಡಿ ರಾಜ್ಯಪಾಲರನ್ನು ತಳ್ಳಿದ್ದಾರೆ ಹಾಗೂ ದಾಳಿ ಮಾಡಿದ್ದಾರೆ ಎಂದು ಟೀಕಿಸಿದರು.

ಕಾನೂನು ಸಚಿವರಾದ ಎಚ್‌.ಕೆ.ಪಾಟೀಲ್‌ ಅವರೇ ಸ್ವತಃ ಈ ಕೆಟ್ಟ ಸಂಪ್ರದಾಯಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವುದು ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಆ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವ ಅರ್ಹತೆ ಇಲ್ಲ ಎಂದು ಹೇಳಿದರು.

ಸದನದ ನಿಯಮಾವಳಿ ಪುಸ್ತಕದ 13 ನೇ ಪುಟದ 27 ನೇ ಕಲಂನಲ್ಲಿ, ರಾಜ್ಯಪಾಲರ ಭಾಷಣದ ಅವಧಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಅವರು ಭಾಷಣ ಮಾಡುವಾಗ ಯಾವುದೇ ಸದಸ್ಯರು ಅಡ್ಡಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆ ರೀತಿ ಮಾಡಿದರೆ ಅದನ್ನು ತೀವ್ರ ಉಲ್ಲಂಘನೆ ಎಂದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಸ್ಪೀಕರ್‌ ಯು.ಟಿ.ಖಾದರ್‌ ಅವರು ತಪ್ಪಿತಸ್ಥ ಸದಸ್ಯರನ್ನು ಶಿಕ್ಷೆಗೆ ಒಳಪಡಿಸಬೇಕು ಹಾಗೂ ಸದನದಿಂದ ಹೊರಗೆ ಹಾಕಬೇಕು. ರಾಜ್ಯಪಾಲರು ಅವರ ಘನತೆಯನ್ನು ಕಾಪಾಡಿಕೊಂಡಿದ್ದು, ಎಂದೂ ಸದನಕ್ಕೆ ಅಗೌರವ ತೋರಿಲ್ಲ. ಈ ಹಿಂದೆ ಎಲ್ಲ ಮಸೂದೆಗಳಿಗೆ ಅವರು ಸಹಿ ಹಾಕಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಜಭವನವನ್ನು ಪಕ್ಷದ ಕಚೇರಿ ಮಾಡಲು ಹೊರಟಿದೆ ಎಂದು ದೂರಿದರು.

ಸ್ಪೀಕರ್‌ಗೆ ಪತ್ರ
ರಾಜ್ಯಪಾಲರು ಸದನದಿಂದ ನಿರ್ಗಮಿಸುವಾಗ ಅಗೌರವ ತೋರಿದ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಪತ್ರದ ಮೂಲಕ ಸ್ಪೀಕರ್‌ ಯು.ಟಿ.ಖಾದರ್‌ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಶಾಸಕರು ಬೀದಿ ರೌಡಿಗಳಂತೆ ವರ್ತಿಸಿ ಸಂವಿಧಾನಕ್ಕೆ, ರಾಜ್ಯಪಾಲರಿಗೆ, ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಸಂಪ್ರದಾಯ ಹಾಗೂ ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುವ ಮೂಲಕ ಸದನಕ್ಕೆ ಅಪಮಾನ ಎಸಗಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್‌ ಪುಡಿ ರೌಡಿ ರೀತಿ ನಡೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಂತಿತ್ತು. ಇಂದಿನ ಘಟನಾವಳಿಗಳು ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದ್ದು, ಸದನದ ಗೌರವಕ್ಕೆ ಚ್ಯುತಿ ತರುವ ರೀತಿ ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದೇನೆ ಎಂದು ಆರ್‌.ಅಶೋಕ್ ತಿಳಿಸಿದ್ದಾರೆ.

Must Read