Friday, January 23, 2026
Friday, January 23, 2026
spot_img

ಇರಾನ್​ ವಿರುದ್ಧ ಮತ್ತೆ ಟ್ರಂಪ್ ಗರಂ: ನಮ್ಮ ಸೈನಿಕರ ದೊಡ್ಡ ಪಡೆ ಅತ್ತ ಸಾಗುತ್ತಿದೆ ಎಂದ ಅಮೆರಿಕ ಅಧ್ಯಕ್ಷ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್​ ವಿರುದ್ಧ ಮತ್ತೆ ಅಮೆರಿಕ ಅಧ್ಯಕ್ಷ ಟ್ರಂಪ್ ಗುಡುಗಿದ್ದು, ಅತ್ತ ಕಡೆಗೆ ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕವು ಈ ಪ್ರದೇಶಕ್ಕೆ ಬೃಹತ್ ನೌಕಾಪಡೆಯನ್ನು ನಿಯೋಜಿಸಿದೆ, ಆದರೆ ಅದನ್ನು ಬಳಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳು ಕಡಿಮೆಯಾಗುತ್ತಿದ್ದಂತೆ ಅವರ ಸ್ವರ ಮೃದುವಾಗಿದೆ. ನೂರಾರು ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಯೋಜನೆಯನ್ನು ಇರಾನ್ ಅಧಿಕಾರಿಗಳು ರದ್ದುಗೊಳಿಸಲು ವಾಷಿಂಗ್ಟನ್ ಒತ್ತಡ ಕಾರಣ ಎಂಬ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷರು ಪುನರಾವರ್ತಿಸಿದ್ದಾರೆ.

ಆರ್ಥಿಕ ಸಂಕಷ್ಟದ ಕುರಿತು ಡಿಸೆಂಬರ್ ಅಂತ್ಯದಲ್ಲಿ ಇರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು, ನಂತರ ಅದು ರಾಷ್ಟ್ರವ್ಯಾಪಿ ಹರಡಿತ್ತು. ಎರಡು ದಿನಗಳ ಹಿಂದಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್​ಗೆ ಬಲವಾದ ಎಚ್ಚರಿಕೆ ನೀಡಿದ್ದರು. ಇರಾನ್ ತನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ಅಮೆರಿಕ ಇರಾನ್ ಅನ್ನು ವಿಶ್ವ ಭೂಪಟದಿಂದ ಅಳಿಸಿಹಾಕುತ್ತದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ, ಇರಾನ್ ಮಿಲಿಟರಿ ವಕ್ತಾರ ಜನರಲ್ ಅಬುಲ್ ಫಜಲ್ ಶೇಕರ್ಚಿ, ನಮ್ಮ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಕಡೆಗೆ ಯಾರಾದರೂ ಕೆಟ್ಟ ಉದ್ದೇಶದಿಂದ ಕೈ ಚಾಚಿದರೆ, ನಾವು ಆ ಕೈಯನ್ನು ಕತ್ತರಿಸುವುದಲ್ಲದೆ, ಅವರ ಇಡೀ ದೇಶವನ್ನೇ ಸುಟ್ಟು ಹಾಕುತ್ತೇವೆ ಎಂದು ಟ್ರಂಪ್‌ಗೆ ತಿಳಿದಿದೆ ಎಂದು ಹೇಳಿದ್ದಾರೆ.

ಟ್ರಂಪ್ ಈ ಹಿಂದೆ ಇರಾನ್‌ಗೆ ಎಚ್ಚರಿಕೆ ನೀಡಿದ್ದರು ಮತ್ತು ಇರಾನ್ ತನ್ನ ವಿರುದ್ಧ ಯಾವುದೇ ಹತ್ಯೆಗೆ ಸಂಚು ರೂಪಿಸಿದರೆ ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುವಂತೆ ತಮ್ಮ ಸಲಹೆಗಾರರಿಗೆ ಸೂಚಿಸಿದ್ದರು.

ಖಮೇನಿ ಅವರನ್ನು ಅಸ್ವಸ್ಥ ವ್ಯಕ್ತಿ ಎಂದು ಬಣ್ಣಿಸಿರುವ ಅವರು, ಅವರು ತನ್ನ ದೇಶವನ್ನು ಸರಿಯಾಗಿ ನಡೆಸಬೇಕು ಮತ್ತು ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು, ಇರಾನ್‌ಗೆ ಹೊಸ ನಾಯಕತ್ವ ಬೇಕು ಎಂದು ಹೇಳಿದ್ದಾರೆ.

ಡಿಸೆಂಬರ್ 28 ರಂದು ಪ್ರಾರಂಭವಾದ ಪ್ರತಿಭಟನೆಗಳ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇರಾನ್‌ನ ಕಳಪೆ ಆರ್ಥಿಕತೆಯ ವಿರುದ್ಧ ಈ ಪ್ರತಿಭಟನೆಗಳನ್ನು ಪ್ರಾರಂಭಿಸಲಾಯಿತು.

Must Read