March 5, 2026
Thursday, March 5, 2026
spot_img

ಬೆಂಗಳೂರಿನಲ್ಲಿ ಮೈಸೂರಿನ ‘ಮೈಲಾರಿ’ ಘಮ ಘಮ: ಹೊಟೇಲ್ ಉದ್ಘಾಟಿಸಿ, ದೋಸೆ ಸವಿದ ಸಿಎಂ ಸಿದ್ದರಾಮಯ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ‘ಒರಿಜಿನಲ್ ವಿನಾಯಕ ಮೈಲಾರಿ-1938’ ಹೊಟೇಲ್ ನ ಬೆಂಗಳೂರು ಶಾಖೆಗೆ ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಸಿದ್ದರಾಮಯ್ಯನವರಿಗೆ ಅಚ್ಚುಮೆಚ್ಚು ಮೈಲಾರಿ ದೋಸೆ
ಮೈಸೂರಿನವರಾದ ಸಿಎಂ ಸಿದ್ದರಾಮಯ್ಯ, ಇಂದು ಹೊಟೇಲ್ ಉದ್ಘಾಟಿಸಿ, ಬೆಂಗಳೂರಿನಲ್ಲೂ ಮೈಸೂರಿನ ಅದೇ ರುಚಿ ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಮೈಲಾರಿ ದೋಸೆಯನ್ನು ಕಾಲೇಜು ದಿನಗಳ ನೆನಪಿನೊಂದಿಗೆ ತಳುಕುಹಾಕಿ, ಇದು ತಮ್ಮ ನೆಚ್ಚಿನ ಖಾದ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ.

ಮೈಸೂರಿನ ಮೂಲ ಮೈಲಾರಿ ದೋಸೆಯ ರುಚಿಯೇ ಇಲ್ಲಿ ಸಿಗುತ್ತಿದೆ, ಹೀಗಾಗಿ ಮೈಸೂರಿಗೇ ಹೋಗಿ ತಿನ್ನಬೇಕೆಂದೇನು ಇಲ್ಲ ಎಂದು ದೋಸೆ ತಿನ್ನುತ್ತಾ ಸಿದ್ದರಾಮಯ್ಯ ಹೇಳಿದರು.

1938ರಲ್ಲಿ ಸಚಿನ್ ಅವರ ಮುತ್ತಜ್ಜಿ ಗೌರಮ್ಮ ಅವರು ಈ ಪುಟ್ಟ ಹೋಟೆಲ್ ನ್ನು ಪ್ರಾರಂಭಿಸಿದರು. ಮೈಲಾರಿ (ಶಿವನ ಅವತಾರ) ದೇವರ ಭಕ್ತೆಯಾಗಿದ್ದ ಗೌರಮ್ಮ, ತಾವು ಮಾಡುವ ವಿಶೇಷ ದೋಸೆಗೆ ತಮ್ಮ ಇಷ್ಟದ ದೇವರ ಹೆಸರನ್ನೇ ಇಟ್ಟರು. ಹೀಗೆ ‘ಮೈಲಾರಿ ದೋಸೆ’ಯ ಪಯಣ ಆರಂಭವಾಯಿತು. ಬೆಣ್ಣೆಯೊಂದಿಗೆ ಮಡಚಿದ ದೋಸೆ, ಅದರ ಜೊತೆಗೆ ತೆಂಗಿನಕಾಯಿಯ ಬಿಳಿ ಚಟ್ನಿ ಮತ್ತು ಸಾಗು ಕಾಂಬಿನೇಷನ್ ನಲ್ಲಿ ದೋಸೆಯನ್ನು ಸವಿಯಬಹುದು.

ಬೆಂಗಳೂರಿನ ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಮೈಸೂರು ಅರಮನೆ ಥೀಮ್‌ನಲ್ಲಿ ಈ ಹೊಸ ರೆಸ್ಟೋರೆಂಟ್ ನಿರ್ಮಾಣವಾಗಿದೆ. ಮೈಸೂರಿನಲ್ಲಿ ಹಳೆಯ ಕಟ್ಟಡದಲ್ಲಿ ಕೇವಲ 20 ಜನರಿಗೆ ಆಸನ ವ್ಯವಸ್ಥೆಯಿದ್ದರೆ, ಬೆಂಗಳೂರಿನ ಶಾಖೆಯಲ್ಲಿ 150ಕ್ಕೂ ಹೆಚ್ಚು ಜನರು ಕುಳಿತು ಊಟ-ತಿಂಡಿ ಸವಿಯುವ ಅವಕಾಶವಿದೆ.

ಮೈಸೂರಿನಲ್ಲಿ ದೋಸೆ, ಇಡ್ಲಿ, ಕಾಫಿ ಮತ್ತು ಕಾಶಿ ಹಲ್ವಾ ಮಾತ್ರ ಲಭ್ಯವಿದ್ದರೆ, ಬೆಂಗಳೂರಿನ ಶಾಖೆಯಲ್ಲಿ ವಿವಿಧ ರೀತಿಯ ಥಾಲಿಗಳು, ಉತ್ತರ ಭಾರತೀಯ ತಿನಿಸುಗಳು ಮತ್ತು ಚೈನೀಸ್ ಖಾದ್ಯಗಳೂ ಲಭ್ಯವಿರುತ್ತವೆ. ಆದರೆ, ನೆಲಮಹಡಿಯನ್ನು ಪ್ರತ್ಯೇಕವಾಗಿ ‘ಮೈಲಾರಿ ದೋಸೆ’ಗಾಗಿಯೇ ಮೀಸಲಿಡಲಾಗಿದೆ ಎಂದು ಆಪರೇಷನಲ್ ಮ್ಯಾನೇಜರ್ ದೀಪುರಾಜ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !