ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಪ್ಟನ್ ಸ್ಮಿತ್ ನೀವು ನಿಜವಾದ ಹೀರೋ! ಎಂದು ಪ್ರಧಾನಿ ಮೋದಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಅವರನ್ನು ಶ್ಲಾಘಿಸಿದ್ದಾರೆ.
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನವನ್ನು ಸಹ ಪೈಲಟ್ ಪತನಗೊಳಿಸಲು ಪ್ರಯತ್ನಿಸಿದ್ದು, ಈ ವೇಳೆ ಕ್ಯಾಪ್ಟನ್ ಸ್ಮಿತ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದು, ನೀವು ರಿಯಲ್ ಹೀರೋ, ಚಾಕುವಿನಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕರ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿದ್ದೀರಿ. ನೀವು ತೆಗೆದುಕೊಂಡ ಒಂದು ನಿರ್ಧಾರದಿಂದ ಇಂದು ನೂರಾರು ಮಂದಿ ಜೀವಂತವಾಗಿದ್ದಾರೆ. ನಿಮ್ಮ ಧೈರ್ಯ ಹಾಗೂ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು?
ಫ್ಲೈ ದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಕಡೆಗೆ ಹೊರಟಿತ್ತು. ಟೇಕಾಫ್ ಆದ ಎರಡು ಗಂಟೆಗಳ ನಂತರ ಕಾಕ್ಪಿಟ್ನಲ್ಲಿ ಪೈಲಟ್ಗಳ ನಡುವೆ ಘರ್ಷಣೆ ನಡೆದಿದೆ. ಓಮನ್ ಪ್ರಜೆಯಾಗಿರುವ ಸಹ ಪೈಲಟ್ ಮುಖ್ಯ ಕ್ಯಾಪ್ಟನ್ ಆಗಿರುವ ಸ್ಮಿತ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ಸ್ಮಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ದೇಹದ ಹಲವು ಭಾಗಗಳಿಂದ ರಕ್ತ ಸುರಿದಿದೆ. ಅಷ್ಟು ನೋವಿದ್ದರೂ ಸ್ಮಿತ್ ವಿಮಾನದ ಕಂಟ್ರೋಲ್ನ್ನು ಸಹ ಪೈಲೆಟ್ಗೆ ನೀಡಿಲ್ಲ. ಸಹ ಪೈಲಟ್ ವಿಮಾನವನ್ನು ಕ್ರಾಶ್ ಮಾಡಲು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ಸ್ಮಿತ್ ಗಟ್ಟಿಯಾಗಿ ನಿಂತು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಕಾಕ್ಪಿಟ್ನಲ್ಲಿನ ಗಲಾಟೆ ಶಬ್ದಕ್ಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕೆಲ ಧೈರ್ಯಶಾಲಿ ಪ್ರಯಾಣಿಕರು ಸಿಬ್ಬಂದಿಗೆ ಸಾಥ್ ನೀಡಿದ್ದಾರೆ.



