ಹೊಸದಿಗಂತ ಡಿಜಿಟಲ್ ಡೆಸ್ಕ್ :
- ಹರೀಶ್ ಕೆ.ಆದೂರು
ಒಬ್ಬ ವ್ಯಕ್ತಿಯ ದೂರದೃಷ್ಠಿ, ಹಾಗೂ ಕನಸು ಹೇಗಿರುತ್ತದೆ ಎಂಬುದಕ್ಕೆ ಆಳ್ವಾಸ್ ವಿರಾಸತ್ ಸ್ಪಷ್ಟ ಉದಾಹರಣೆ. ಕೇವಲ 250 ಮಂದಿ ಪ್ರೇಕ್ಷಕರೆದುರು ತೆರೆದುಕೊಂಡ ವಿರಾಸತ್ ಇಂದು 40 ಸಹಸ್ರಕ್ಕೂ ಮಿಕ್ಕಿದ ಬೃಹತ್ ಪ್ರೇಕ್ಷಕ ಸಮೂಹವನ್ನು ಸಂಪಾದಿಸಿದಿದೆ ಎಂದರೆ ಅದೊಂದು ಅಚ್ಚರಿಯೇ ಸೈ.
ಮೂವತ್ತು ವರುಷಕ್ಕೆ ಮೊದಲು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸಣ್ಣ ಪ್ರೇಕ್ಷಕ ವರ್ಗದೆದುರು ವಿರಾಸತ್ ವೈಭವ ಪ್ರಾರಂಭಗೊಂಡಿತು. ಮುಂದೆ ಮಹಾವೀರ ಕಾಲೇಜು, ಧವಳಾ ಮಹಾವಿದ್ಯಾಲಯಗಳಲ್ಲಿ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಕಾರ್ಯಕ್ರಮ ವೈಭವ ನಡೆದಿದ್ದವು. ಅಲ್ಲಿಂದ ಮುಂದೆ ಐತಿಹಾಸಿಕ ಪ್ರಸಿದ್ಧಿಯ ಸಾವಿರ ಕಂಬದ ಬಸದಿಯ ಆವರಣದಲ್ಲಿ ವಿರಾಸತ್ ಹೊಸ ಕಳೆಯೊಂದಿಗೆ ಪ್ರದರ್ಶನ ನೀಡಲಾರಂಭಿಸಿತು. ವಾರಗಳ ಕಾಲ ನಡೆಯುವ ವಿರಾಸತ್ ವೈಭವದಲ್ಲಿ ದಿನಕ್ಕೊಂದರಂತೆ ವೇದಿಕೆ ಅಲಂಕಾರ, ಆವರಣಗಳ ಅಲಂಕಾರಗಳನ್ನು ಮಾಡುತ್ತಾ ಮೋಹನ ಆಳ್ವರು ಹೊಸ ಲೋಕವನ್ನೇ ಸೃಷ್ಠಿಸಲಾರಂಭಿಸಿದರು.
ಒಂದು ದಿನ ತೆಂಗಿನ ಗರಿಗಳ ಶೃಂಗಾರವಿದ್ದರೆ, ಮತ್ತೊಂದು ದಿನ ಬಿದಿರಿನಿಂದ ಅಲಂಕಾರ, ವೇದಿಕೆ ಸೃಷ್ಠಿ. ಹೀಗೆ ದಿನ ದಿನವೂ ವೇದಿಕೆಗಳಲ್ಲಿ ಹೊಸತನ ಸೃಷ್ಠಿಸುತ್ತಾ ಮೋಹನ ಆಳ್ವರು ಪ್ರೇಕ್ಷಕ ವರ್ಗವನ್ನು ಹಂತ ಹಂತವಾಗಿ ಆಕರ್ಷಿಸತೊಡಗಿದರು.!
ಅಲ್ಲಿಂದ ನಂತರ ಮಿಜಾರಿನ ಶೋಭಾವನದ ತುತ್ತ ತುದಿಯಲ್ಲಿ ಬೃಹತ್ ಶ್ವೇತವರ್ಣದ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದವು. ಅಲ್ಲಿ ಏಳೆಂಟು ವರ್ಷ ಕಾರ್ಯಕ್ರಮಗಳು ನಡೆಯಿತು. ಅಲ್ಲಿಂದ ನಂತರ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡಿಗೆ ಅದು ಸ್ಥಳಾಂತರಗೊಂಡು, ಹೆಚ್ಚಿನ ಪ್ರೇಕ್ಷಕವರ್ಗವನ್ನು ಸಂಪಾದಿಸಿಕೊಂಡಿತು. ಕಳೆದ ಕೆಲವು ವರುಷಗಳಿಂದ ಪ್ರೇಕ್ಷಕ ಸಂಖ್ಯೆಯು ಅಧಿಕವಾಗುತ್ತಾ ಸ್ಥಾನಪಲ್ಲಟಗೊಂಡು ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವಜನಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗ ಮಂದಿರದಲ್ಲಿ ದೊಡ್ಡ ಪ್ರಮಾಣದಲ್ಲಿ ವಿರಾಸತ್ ವೈಭವ ಅನಾವರಣಗೊಳ್ಳತೊಡಗಿದೆ.
ಇತಿಹಾಸ ಸೃಷ್ಟಿಯಾಯಿತು!:
ಮೂವತ್ತು ವರುಷಗಳಲ್ಲಿ ದೊಡ್ಡ ಇತಿಹಾಸವೇ ನಡೆದು ಹೋಯಿತು. ಮೂಡುಬಿದಿರೆಯಲ್ಲಿ ಶಿಸ್ತಿನ ಪ್ರೇಕ್ಷಕ ವರ್ಗದ ನಿರ್ಮಾಣವಾಯಿತು. ಇದಕ್ಕೆಲ್ಲಾ ಡಾ.ಎಂ.ಮೋಹನ ಆಳ್ವರ ಕಾರ್ಯಕ್ರಮ ಆಯೋಜನೆ, ಆಲೋಚನೆಗಳೇ ಮೂಲ ಕಾರಣವಾಯಿತು. ಮೋಹನ ಆಳ್ವರ ನೇತೃತ್ವದ ಯಾವುದೇ ಕಾರ್ಯಕ್ರಮವಿರಲಿ ನಿರ್ದಿಷ್ಟ ಸಂಖ್ಯೆಯ ಪ್ರೇಕ್ಷಕ ವರ್ಗ ಕೇವಲ ಮೂಡುಬಿದಿರೆಯಲ್ಲಷ್ಟೇ ಅಲ್ಲ, ರಾಜ್ಯ ಮಟ್ಟದಲ್ಲಿ ಇಂದು ಸಿದ್ಧರಾಗಿದ್ದಾರೆ. ಇದು ದೊಡ್ಡ ಸಾಧನೆಯೇ ಸರಿ.
ಇಂದು ಆಳ್ವಾಸ್ ವಿರಾಸತ್‌ನಂತಹ ಸಾಂಸ್ಕೃತಿಕ ಕಾರ್ಯಕ್ರಮ, ಆಳ್ವಾಸ್ ನುಡಿಸಿರಿಯಂತಹ ಸಾಹಿತ್ಯಕ ಕಾರ್ಯಕ್ರಮಗಳಿಗೆ ಲಕ್ಷಾಂತರ ಮಂದಿ ಸೇರುವುದಷ್ಟೇ ಅಲ್ಲದೆ, ಸಂಪೂರ್ಣ ಶಿಸ್ತುಬದ್ಧವಾಗಿ ಕಾರ್ಯಕ್ರಮ ವೀಕ್ಷಿಸುವ ಮಟ್ಟಿಗೆ ಬೆಳೆದುಬಂದಿದೆ. ಒಂದು ‘ಬ್ರಾಂಡ್’ ಸಿದ್ಧವಾಗುವಂತಾಗಿದೆ.
ಇಂದು ಇಡೀ ವಿರಾಸತ್ ವೈಭವವನ್ನು ಕಣ್‌ತುಂಬಿಕೊಳ್ಳಲು ದಿನವೊಂದಕ್ಕೆ ಒಂದು ಲಕ್ಷಕ್ಕೂ ಮೀರಿ ಜನ ಬರುತ್ತಿದ್ದಾರೆ. ಸ್ಥಳೀಯ ಕೇಬಲ್ ನೆಟ್‌ವರ್ಕ್, ಯೂ ಟ್ಯೂಬ್‌ಗಳ ಮೂಲಕ ಜಗದಗಲದಲ್ಲಿ ವಿರಾಸತ್ ವೈಭವದ ಸವಿ ಸವಿಯುವ ಮಂದಿ ಇನ್ನೆಷ್ಟೋ!
ಆಧುನಿಕತೆಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಂಡು, ಮೇಲ್ದರ್ಜೆಗೇರುತ್ತಾ, ಶಿಸ್ತು, ಸಮಯಪ್ರಜ್ಞೆಯೊಂದಿಗೆ ಕಾರ್ಯಕ್ರಮ ಆಯೋಜಿಸುತ್ತಿರುವ ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರಿಗೆ ಅವರ ಕತೃತ್ವ ಶಕ್ತಿಗೆ ಪ್ರತಿಯೊಬ್ಬರೂ ತಲೆಬಾಗುತ್ತಿದ್ದಾರೆ.