ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ನ ಸಂಧ್ಯಾ ಥೇಟರ್ ಬಳಿ ಕಾಲ್ತುಳಿತದಲ್ಲಿ ಮಹಿಳೆ ಒಬ್ಬರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ಗೆ 14 ದಿನಗಳ ಕಾಲ ನ್ಯಾಯಬಂಧನ ವಿಧಿಸಿ ನಾಂಪಲ್ಲಿ ಕೋರ್ಟ್ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಮೃತ ರೇವತಿ ಅವರ ಪತಿ ಭಾಸ್ಕರ್ ನೀಡಿದ ದೂರಿನ ಮೇಲೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದಿದ್ದರು. ಇದೀಗ ಭಾಸ್ಕರ್ ದೂರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಭಾಸ್ಕರ್, ದೂರನ್ನು ಹಿಂಪಡೆಯಲು ನಾನು ಸಿದ್ಧ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ನಿರಪರಾಧಿ. ಅಲ್ಲು ಅರ್ಜುನ್ ಅವರನ್ನು ಬಂಧಿಸುತ್ತಾರೆ ಎಂದುಕೊಂಡಿರಲಿಲ್ಲ. ಕಾಲ್ತುಳಿತದಿಂದ ಪತ್ನಿ ಮರಣ ಹೊಂದಿದ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲಎಂದು ತಿಳಿಸಿದ್ದಾರೆ.