ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಭಕ್ತಿಯ ಸಿನೆಮಾಗಳ ಸಾಲಿನಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ‘ಬಾರ್ಡರ್ 2’ ಚಿತ್ರ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 1997ರ ಸೂಪರ್ ಹಿಟ್ ‘ಬಾರ್ಡರ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ದಶಕಗಳ ನಂತರ ಸನ್ನಿ ಡಿಯೋಲ್ ಅವರನ್ನು ಗಡಿಭದ್ರತಾ ಯೋಧನ ಪಾತ್ರದಲ್ಲಿ ಮತ್ತೆ ತೆರೆ ಮೇಲೆ ತರುತ್ತಿರುವುದರಿಂದ ಭಾರಿ ಕುತೂಹಲ ಮೂಡಿಸಿದೆ.
ಅನುರಾಗ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1971ರ ಭಾರತ–ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿನ ಕಥೆ, ಭಾರತೀಯ ಸೇನೆಯ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸಿನಿಮಾ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದೆ.
ಭಾರತ ಹಾಗೂ ಹಲವು ವಿದೇಶಿ ಮಾರುಕಟ್ಟೆಗಳಲ್ಲಿ ‘ಬಾರ್ಡರ್ 2’ ಭರ್ಜರಿ ಬಿಡುಗಡೆ ಪಡೆದಿದ್ದರೂ, ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ಪ್ರದರ್ಶನವಾಗಿಲ್ಲ. ಪಾಕಿಸ್ತಾನವನ್ನು ಪ್ರತಿಸ್ಪರ್ಧಿ ರಾಷ್ಟ್ರವಾಗಿ ಚಿತ್ರಿಸಿರುವ ವಿಷಯವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಅಧಿಕೃತ ನಿಷೇಧ ಇಲ್ಲದಿದ್ದರೂ, ಇಂತಹ ವಿಷಯಗಳಿರುವ ಸಿನಿಮಾಗಳಿಗೆ ಗಲ್ಫ್ ದೇಶಗಳು ಸಾಮಾನ್ಯವಾಗಿ ಅನುಮತಿ ನೀಡುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.


