ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಬಾಂಗ್ಲಾದೇಶದ ಸುನಾಮ್ ಗಂಜ್ ಜಿಲ್ಲೆಯಲ್ಲಿ ಹಿಂದುಗಳ ಮನೆ, ಅಂಗಡಿ ಮತ್ತು ಸ್ಥಳೀಯ ಲೋಕನಾಥ್ ದೇವಾಲಯ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು,150 ರಿಂದ 170 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ತಿಂಗಳ ಆರಂಭದಲ್ಲಿ ಸುನಮ್ ಗಂಜ್ ಜಿಲ್ಲೆಯ ದೋರಬಜಾರ್ ಪ್ರದೇಶದಲ್ಲಿ ಆಸ್ತಿ ಧ್ವಂಸ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಢಾಕಾದ ಮುಖ್ಯ ಸಲಹೆಗಾರರ ಮಾಧ್ಯಮ ವಿಭಾಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 3 ರಂದು ಸುನಮ್‌ಗಂಜ್ ಜಿಲ್ಲೆಯ ನಿವಾಸಿ ಆಕಾಶ್ ದಾಸ್ ಎಂಬಾತ ಫೇಸ್‌ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟುಮಾಡಿತು. ಆತ ಪೋಸ್ಟ್ ನ್ನು ಡಿಲೀಟ್ ಮಾಡಿದ್ದರೂ ಸ್ಕ್ರೀನ್‌ಶಾಟ್‌ಗಳು ವ್ಯಾಪಕವಾಗಿ ಹರಡಿ, ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಸರ್ಕಾರಿ ಸುದ್ದಿ ಸಂಸ್ಥೆ ಬಾಂಗ್ಲಾದೇಶ ಸಂಗ್‌ಬಾದ್ ಸಂಸ್ಥಾ (ಬಿಎಸ್‌ಎಸ್) ಹೇಳಿಕೆಯಲ್ಲಿ ತಿಳಿಸಿದೆ.
ಗುಂಪೊಂದು ಹಿಂದು ಸಮುದಾಯದ ಮನೆಗಳು, ಅಂಗಡಿಗಳು ಮತ್ತು ಸ್ಥಳೀಯ ಲೋಕನಾಥ ದೇವಸ್ಥಾನವನ್ನು ಧ್ವಂಸಗೊಳಿಸಿ, ಹಾನಿಯನ್ನುಂಟು ಮಾಡಿದೆ. ಪೊಲೀಸರು ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಿ 150-170 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಶನಿವಾರ 12 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ ಎಂದು BSS ಹೇಳಿದೆ.