ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಬೈಲ್ ಫೋನ್ ಹೆಚ್ಚು ನೋಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನೆಬಿಟ್ಟು ಹೋಗಿದ್ದ 15 ವರ್ಷದ ಬಾಲಕಿ ಒಂಬತ್ತು ದಿನಗಳ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಬಾಲಕಿ ತನ್ನ ಕುಟುಂಬದೊಂದಿಗೆ ಥಾಣೆ ಜಿಲ್ಲೆಯ ಡೊಂಬಿವಿಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಡಿಸೆಂಬರ್ 5 ರಂದು, ಆಕೆಯ ತಾಯಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಬೇಡ ಮತ್ತು ಓದಿನ ಕಡೆ ಗಮನ ಹರಿಸುವಂತೆ ಬುದ್ದಿ ಹೇಳಿದ್ದರು. ಇದರಿಂದ ಕೋಪಕೊಂಡ ಬಾಲಕಿ ಮನೆ ಬಿಟ್ಟು ಹೋಗಿದ್ದಳು ಎಂದು ವಿಷ್ಣುನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮಗಳು ವಾಪಸ್ ಮನೆಗೆ ಬರದಿದ್ದಾಗ ಆಕೆಯ ಕುಟುಂಬಸ್ಥರು ಮರುದಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಅಪಹರಣ ಆರೋಪದ ಮೇಲೆ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಡಿಸೆಂಬರ್ 5 ರಂದು ಡೊಂಬಿವಿಲಿಯ ಮೋಟಗಾಂವ್ ಸೇತುವೆಯಿಂದ ಬಾಲಕಿ ತೊರೆಗೆ ಹಾರಿದ್ದಾಳೆ ಎಂಬ ಸಂದೇಶ ಪೊಲೀಸರಿಗೆ ಬಂದಿತ್ತು. ಶನಿವಾರ ಮಧ್ಯಾಹ್ನ, ಮೃತದೇಹ ತೊರೆಯಲ್ಲಿ ಪತ್ತೆಯಾಗಿದ್ದು, ಆಕೆಯ ಕುಟುಂಬದ ಸದಸ್ಯರು ಬಾಲಕಿಯನ್ನು ಗುರುತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನಂತರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಸಾವಿನ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.