ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚಮಸಾಲಿ ಸಮುದಾಯದ ಜನರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಹಾಗೂ ಮರಾಠ ಸಮುದಾಯದ ಜನರು ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಮಾರಣಾಂತಿಕವಾಗಿ ಹೊಡೆದಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಮುದಾಯದ ಜನರು ರೊಚ್ಚಿಗೆದ್ದು ರಾಜ್ಯಾದ್ಯಂತ ಹೋರಾಟ ನಡೆಸಿದ್ದಾರೆ. ಈ ಘಟನೆಯನ್ನು ವಿಧಾನಸಭೆಯಲ್ಲಿ ಖಂಡಿಸಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅನ್ನ ಕೊಡುವ ಪಂಚಮಸಾಲಿಗಳ ಮೇಲೆ ಕೈ ಮಾಡಿದ್ದಕ್ಕೆ ಸರ್ಕಾರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರೂ, ಕಾಂಗ್ರೆಸ್ ನಾಯಕರು ಅದಕ್ಕೆ ಸಮ್ಮತಿಸಿಲ್ಲ. ಲಾಠಿ ಚಾರ್ಜ್ ಮಾಡಿರುವುದು ಸರಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.